ತಮಿಳು ಚಿತ್ರರಂಗದ ಖ್ಯಾತ ನಟ ರಜನೀಕಾಂತ್ ಅವರನ್ನು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನ ಮತದಾರರನ್ನು ಸೆಳೆಯಲು ಕೇಂದ್ರದ ಬಿಜೆಪಿ ಸರ್ಕಾರ ಈ ಆಯ್ಕೆ ಮಾಡಿದೆ ಎಂಬ ಟೀಕೆ ಕೂಡ ಕೇಳಿಬಂದಿದೆ.
ಭಾರತೀಯ ಚಿತ್ರರಂಗದ ಶ್ರೇಷ್ಠ ನಟ ರಜನಿಕಾಂತ್ ಅವರನ್ನು 2019ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಘೋಷಿಸಲು ಸಂತೋಷವಾಗಿದೆ. ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರನಾಗಿ ಅವರು ನೀಡಿದ ಕೊಡುಗೆ ಅನನ್ಯ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
ತೀರ್ಪುಗಾರರಾಗಿ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ, ನಿರ್ದೇಶಕ-ನಿರ್ಮಾಪಕ ಸುಭಾಷ್ ಘಾಯ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಸಂಗೀತ ಸಂಯೋಜಕ ಮತ್ತು ಗಾಯಕ ಶಂಕರ್ ಮಹಾದೇವನ್ ಮತ್ತು ಬಿಸ್ವಜಿತ್ ಚಟರ್ಜಿ ಕಾರ್ಯನಿರ್ವಹಿಸಿದ್ದಾರೆ.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಈ ಸಂದರ್ಭದಲ್ಲಿ ತಮಿಳು ಮತಗಳನ್ನು ಸೆಳೆಯಲು ಈ ಘೋಷಣೆ ಮಾಡಲಾಗಿವೆ ಎಂಬ ಆರೋಪ ಕೂಡ ಕೇಳಿಬಂದಿದೆ.