ರಾಜ್ಯಕ್ಕೂ ತಟ್ಟಿದ ಬಾಂಗ್ಲಾ ಆರ್ಥಿಕ ಬಿಕ್ಕಟ್ಟು: ಟೊಮೆಟೋ ಬೆಲೆ ದಿಢೀರ್ ಕುಸಿತ

Prasthutha|

ಕೋಲಾರ: ಬಾಂಗ್ಲಾದೇಶದಲ್ಲಿ ಅರಾಜಕತೆ, ಆಂತರಿಕ ಕಲಹ, ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆಗೆ ತಟ್ಟಿದೆ.

- Advertisement -

ಪರಿಣಾಮ ಕೋಲಾರದ ಟೊಮೆಟೋ ಬೆಳೆಗಾರರು ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಟೊಮೆಟೋ ಬೆಲೆ ಕೂಡಾ ತೀವ್ರ ಕುಸಿತ ಕಂಡಿದೆ.

ಕಳೆದ ಒಂದೂವರೆ ತಿಂಗಳಿಂದ ಭಾರತದ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರ ಎಫೆಕ್ಟ್ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕುಸಿತ ಕಂಡಿದೆ.

- Advertisement -

ಪ್ರತಿನಿತ್ಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ಬಾಂಗ್ಲಾದೇಶಕ್ಕೆ 800-1000 ಟನ್ ಟೊಮೆಟೋ ರಪ್ತು ಮಾಡಲಾಗುತ್ತಿತ್ತು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಕೇವಲ 50-60 ಟನ್ ಟೊಮೆಟೋ ರಫ್ತಾಗುತ್ತಿದೆ. ಬೇಡಿಕೆ ಇಲ್ಲದೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಆಗಸ್ಟ್ ತಿಂಗಳಲ್ಲಿ ಬಾಕ್ಸ್ ಟೊಮೆಟೋ ಬೆಲೆ 800-900 ಇತ್ತು. ಇವತ್ತು ಮಾರುಕಟ್ಟೆಯಲ್ಲಿ ಬೆಲೆ ಕೇವಲ 300-400 ರೂಪಾಯಿಗೆ ಇಳಿದಿದೆ. ಒಂದುವೇಳೆ ವ್ಯಾಪಾರಸ್ಥರೊಂದಿಗೆ ಸಂಪರ್ಕ ಕಡಿತವಾದರೆ ಬಾಕಿ ಬರಬೇಕಾಗಿರುವ ಕೋಟ್ಯಂತರ ರೂಪಾಯಿ ಹಣ ಬಾರದಾಗುತ್ತದೆ. ನಾವು ನಷ್ಟ ಅನುಭವಿಸುವ ಸ್ಥಿತಿ ಎದುರಾಗುತ್ತದೆ ಎಂದು ಬಾಂಗ್ಲಾದೊಂದಿಗೆ ವ್ಯವಹಾರ ನಡೆಸುತ್ತಿರುವ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.



Join Whatsapp