ಲಖನೌ: ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತುಗೊಂಡ ಘಟನೆ ನಡೆದಿದೆ.
ಕನೌಜ್‌ನ ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್ಪುರ್ ಚಪುನ್ನಾ ಚೌಕಿಯ ಸಬ್ ಇನ್ಸ್‌ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತುಗೊಂಡವರು.
ಸಬ್ ಇನ್ಸ್‌ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಲಂಚ ಕೇಳುತ್ತಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ವೈರಲ್ ಆಡಿಯೋದಲ್ಲಿ ರಾಮ್ ಕೃಪಾಲ್ ಸಿಂಗ್ ರೈತರೊಬ್ಬರ ಬಳಿ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಟ್ಟಿರುವುದು ಕೇಳಿಸುತ್ತದೆ. ಬಡ ರೈತ ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಬದಲಿಗೆ 2 ಕೆಜಿ ನೀಡುವುದಾಗಿ ಉತ್ತರಿಸುತ್ತಾರೆ. ನಂತರ ಅಂತಿಮವಾಗಿ ಒಪ್ಪಂದವನ್ನು 3 ಕೆಜಿಗೆ ಮಾಡಿಕೊಳ್ಳಲಾಗುತ್ತದೆ.
ಕನೌಜ್ ಪೊಲೀಸ್ ಠಾಣೆಯ ಸಿಬ್ಬಂದಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಎಸ್‌ಐ ರಾಮ್ ಕೃಪಾಲ್ ಸಿಂಗ್‌ನನ್ನು ಕನೌಜ್‌ನ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ. ಈ ಸಂಬಂಧ ಇಲಾಖಾ ಪ್ರಕ್ರಿಯೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದಿದ್ದಾರೆ.
ಸದ್ಯ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿ ಕೋಡ್ ಭಾಷೆ ಬಳಸಿರಬಹುದು, ಅದು 5 ಲಕ್ಷ ರೂ.ಗೆ ಬೇಡಿಕೆಯಿಟ್ಟಿರಬಹುದು ಎನ್ನಲಾಗುತ್ತಿದೆ.