ವಿನೇಶ್ ಫೋಗಟ್ ಅನರ್ಹ: ಸೆಮಿಫೈನಲ್ ಸೋತಿದ್ದ ಸ್ಪರ್ಧಿಗೆ ಫೈನಲ್ ಗೆಲ್ಲುವ ಅವಕಾಶ

Prasthutha|

ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದ ಫೈನಲ್ ನಿಂದ ಭಾರತದ ವಿನೇಶ್ ಫೋಗಟ್ ಅನರ್ಹರಾದ ಬೆನ್ನಲ್ಲೇ, ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ಗೆ ಅದೃಷ್ಟ ಒಲಿದಿದೆ.

- Advertisement -

ಮಂಗಳವಾರ ನಡೆದ ಸೆಮಿಫೈನಲ್ ನಲ್ಲಿ ಲೊಪೇಜ್ ಎದುರು 5–0 ಅಂತರದಿಂದ ಗೆದ್ದಿದ್ದ ಫೋಗಟ್, 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ಅಂತಿಮ ಹಣಾಹಣಿಯಿಂದ ಅನರ್ಹರಾಗಿದ್ದಾರೆ.


ಹೀಗಾಗಿ, ಅಂತಿಮ ಹಣಾಹಣಿಯಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಮತ್ತು ಲೊಪೇಜ್ ಮುಖಾಮುಖಿಯಾಗಲಿದ್ದಾರೆ.

- Advertisement -


ವಿನೇಶ್ ಫೋಗಟ್ ಅನರ್ಹ
ವಿನೇಶ್ ಫೋಗಟ್ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿದ್ದರು. ವಿನೇಶ್ ಈ ಪಂದ್ಯವನ್ನು 5-0 ಅಂತರದಿಂದ ಗೆದ್ದಿದ್ದರು. ಆದರೆ ಈ ಪಂದ್ಯದ ನಂತರ ಆಕೆಗೆ ಮತ್ತು ಭಾರತೀಯ ಅಭಿಮಾನಿಗಳು ಊಹಿಸಲೂ ಸಾಧ್ಯವಾಗದಂತಹ ಘಟನೆ ಸಂಭವಿಸಿದೆ. ಸೆಮಿಫೈನಲ್ ಪಂದ್ಯವನ್ನು ಗೆದ್ದ ನಂತರ ವಿನೇಶ್ ಫೋಗಟ್ ಅವರ ತೂಕವನ್ನು ಪರೀಕ್ಷಿಸಲಾಗಿದ್ದು, ಅವರ ತೂಕದಲ್ಲಿ ನಿಗದಿತ ಮಿತಿಗಿಂತ ಹೆಚ್ಚಳ ಕಂಡುಬಂದಿತ್ತು. ಹೀಗಾಗಿ ವಿನೇಶ್ ತಮ್ಮ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು. ಇದರ ಹೊರತಾಗಿಯೂ ಅವರ ತೂಕ 50 ಕೆಜಿ, 100 ಗ್ರಾಂಗಿಂತ ಹೆಚ್ಚಿತ್ತು. ಹೀಗಾಗಿ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಲಾಯಿತು.


ತೂಕ ಇಳಿಸಲು ನಾನಾ ಕಸರತ್ತು
ವರದಿಗಳ ಪ್ರಕಾರ, ಮಂಗಳವಾರ ವಿನೇಶ್ ಫೋಗಟ್ ತನ್ನ ಮೊದಲ ಪಂದ್ಯವನ್ನು ಆಡುವುದಕ್ಕಿಂತ ಮುಂಚೆ ಅವರ ತೂಕವನ್ನು ಪರೀಕ್ಷಿಸಲಾಗಿತ್ತು. ಆ ಸಮಯದಲ್ಲಿ ಅವರ ತೂಕ 49 ಕೆಜಿ, 900 ಗ್ರಾಂ ಆಗಿತ್ತು. ಆದರೆ ಸೆಮಿಫೈನಲ್ನಲ್ಲಿ ಗೆದ್ದ ಬಳಿಕ ಅವರ ತೂಕವನ್ನು ಪರೀಕ್ಷಿಸಲಾಗಿ ಅವರ ತೂಕದಲ್ಲಿ ಸುಮಾರು 2.8 ಕೆಜಿಯಷ್ಟು ಹೆಚ್ಚಳ ಕಂಡುಬಂದಿತ್ತು. ಇದರ ನಂತರ, ವಿನೇಶ್ ಫೋಗಟ್ ಈ ತೂಕವನ್ನು ಕಡಿಮೆ ಮಾಡಲು ರಾತ್ರಿಯಿಡೀ ಶ್ರಮಿಸಿದರು. ರನ್ನಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡಿದ್ದರು. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು ಕೂದಲು, ಉಗುರುಗಳನ್ನೂ ಸಹ ಕತ್ತರಿಸಿದ್ದಾರೆ. ಜೊತೆಗೆ ರಕ್ತವನ್ನು ಸಹ ತೆಗೆದಿದ್ದರು ಎಂಬ ವರದಿಗಳಿವೆ. ಆದರೆ ಇದರ ಹೊರತಾಗಿಯೂ ಅವರು ತನ್ನ ತೂಕವನ್ನು 50 ಕೆಜಿಗೆ ಇಳಿಸುವಲ್ಲಿ ವಿಫಲರಾಗಿದ್ದಾರೆ.



Join Whatsapp