ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇತೃತ್ವದ ಗಣೇಶೋತ್ಸವದಲ್ಲಿ ಆರ್‌ಎಸ್‌ಎಸ್ ಚಿಂತಕಿಯ ಪ್ರವಚನ

Prasthutha|

ಕೆ. ಹರೀಶ್ ಕುಮಾರ್ ನಡೆಗೆ ಕಾಂಗ್ರೆಸ್ ಪಕ್ಷ ಮತ್ತು ಬಿಲ್ಲವ ಸಮುದಾಯದಿಂದ ತೀವ್ರ ಆಕ್ಷೇಪ

- Advertisement -

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯು ಕಳೆದ ಒಂದು ದಶಕದಿಂದ ಬೆಳ್ತಂಗಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಯೋಜಿಸುತ್ತಿದ್ದು, ಈ ಬಾರಿ ಬೆಳ್ತಂಗಡಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವು ಆಗಸ್ಟ್ 8ರಿಂದ 16ರವರೆಗೆ ಬೆಳ್ತಂಗಡಿಯ ಸಮಾಜ ಮಂದಿರದಲ್ಲಿ ನಿಗದಿಯಾಗಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಂಘಪರಿವಾರದ ವಲಯದಲ್ಲಿ ಚಿಂತಕಿ ಎಂದು ಗುರುತಿಸಿಕೊಂಡಿರುವ ವೀಣಾ ಬನ್ನಂಜೆಯವರ ಪ್ರವಚನ ಆಯೋಜನೆ ಮಾಡಿರುವುದು ವಿವಾದದ ಕಿಡಿ ಹಚ್ಚಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಸಂಘಪರಿವಾರದ ಪರ ಒಲವುಳ್ಳ ಚಿಂತಕಿಯ ಪ್ರವಚನ ಆಯೋಜಿಸಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -


ಇನ್ನೊಂದೆಡೆ ಬಿಲ್ಲವ ಸಮುದಾಯದಿಂದಲೂ‌ ಆಕ್ಷೇಪ ವ್ಯಕ್ತವಾಗಿದ್ದು, ನಾರಾಯಣ ಗುರುಗಳ ಪಠ್ಯ ತೆಗೆದು ಗುರುಗಳಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಬೆಂಬಲಿಸಿರುವ ವೀಣಾ ಬನ್ನಂಜೆ ಅವರಿಗೆ ಬಿಲ್ಲವ ಸಮುದಾಯದ ಹರೀಶ್ ಕುಮಾರ್ ಮಣೆ ಹಾಕಿರುವುದು ತಪ್ಪು ಎಂಬ ಅಭಿಪ್ರಾಯಗಳು ಬಿಲ್ಲವ ಸಮುದಾಯದಿಂದ ಕೇಳಿಬಂದಿದೆ‌. ರೋಹಿತ್ ಚಕ್ರತೀರ್ಥ ಸಾಹಿತ್ಯ ಲೋಕದ ಸೂರ್ಯ ಎಂದು ವೀಣಾ ಬನ್ನಂಜೆ ಬಿರುದು ನೀಡಿದ್ದರು.

‘ಕೋಮುವಾದಿ ಸಿದ್ಧಾಂತವನ್ನು ಬೆಂಬಲಿಸಿ ಶ್ರೇಣಿಕೃತ ಸಮಾಜವನ್ನು ಪ್ರತಿಪಾದಿಸುವ ಜನರಿಗೆ ಮಣೆ ಹಾಕುವ ಮೂಲಕ‌ ಹರೀಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷ ಮತ್ತು ಸಾಮಾಜಿಕ‌ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಹರೀಶ್ ಕುಮಾರ್ ವಿರುದ್ಧ ಕೆಪಿಸಿಸಿ ಮತ್ತು ಹೈಕಮಾಂಡ್ ನಾಯಕರಿಗೆ ದೂರು ನೀಡುವುದಾಗಿ ಜಿಲ್ಲಾ ಕಾಂಗ್ರೆಸ್ ನಾಯಕರೊಬ್ಬರು ಪ್ರಸ್ತುತ ನ್ಯೂಸ್‌ಗೆ ತಿಳಿಸಿದ್ದಾರೆ.

ಉಡುಪಿ ಮೂಲದ ವೀಣಾ ಬನ್ನಂಜೆ ಅವರು ಬನ್ನಂಜೆ ಗೋವಿಂದಾಚರ್ಯರ ಪುತ್ರಿ. ವಿದ್ವಾಂಸರು ಎನಿಸಿಕೊಂಡಿದ್ದ ಗೋವಿಂದಾಚಾರ್ಯರು ಕರಾವಳಿಯಲ್ಲಿ ಸಂಘಪರಿವಾರದ ಬೆಳವಣಿಗೆಗಳಿಗೆ ಪೂರವಾಗಿ ಕೆಲಸ ಮಾಡಿದ್ದು, ಸಂಘಪರಿವಾರದ ಬೆಳವಣಿಗೆಯಿಂದ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ಗೆ ರಾಜಕೀಯವಾಗಿ ಹೊಡೆತ ಬಿದ್ದಿದೆ ಎಂಬ ಅಭಿಪ್ರಾಯಗಳಿವೆ. ವೀಣಾ ಬನ್ನಂಜೆ ಕೂಡ ತಂದೆಯಂತೆ ಸಂಘಪರಿವಾರದ ಜೊತೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಬಿಜೆಪಿ‌ ಸರಕಾರದ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ವಿವಾದ ಸೃಷ್ಟಿಸಿದಾಗ ವೀಣಾ ಬನ್ನಂಜೆಯವರು ಚಕ್ರತೀರ್ಥ ಅವರನ್ನು ಬೆಂಬಲಿಸಿದ್ದರು.

ಈ ಮಧ್ಯೆ ಹರೀಶ್ ಕುಮಾರ್ ಅವರ ತಲೆದಂಡಕ್ಕೆ ಮತ್ತೊಮ್ಮೆ ಆಗ್ರಹಗಳು‌ ಕೇಳಿಬಂದಿವೆ. ಹರೀಶ್ ಕುಮಾರ್ ಜಿಲ್ಲಾಧ್ಯಕ್ಷರಾದ ಬಳಿಕ‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸತತವಾಗಿ ಹಿನ್ನಡೆ ಅನುಭವಿಸಿದ್ದು, ಕಳೆದ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಅವರು ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದರು. ಇದೀಗ ವೀಣಾ ಬನ್ನಂಜೆಯವರ ಪ್ರವಚನ ಆಯೋಜಿಸಿರುವ ಕಾರಣಕ್ಕೆ ಹರೀಶ್ ಕುಮಾರ್ ರಾಜೀನಾಮೆಗೆ ಮತ್ತೆ ಕೂಗೆದ್ದಿದೆ. ಅವರು ರಾಜೀನಾಮೆ ನೀಡದಿದ್ದರೆ ಪಕ್ಷ ಅವರ ತಲೆದಂಡ ಪಡೆಯಬೇಕು ಎಂಬ ಆಗ್ರಹಗಳು ಕೇಳಿಬಂದಿದೆ.
ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ವಿರೋಧಿಸುವ ಜನರಿಗೆ ವೇದಿಕೆ ಕಲ್ಪಿಸಿರುವ ಹರೀಶ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲೆ ನೆರೆಯಿಂದ ಸಂಕಷ್ಟ ಅನುಭವಿಸುತ್ತಿರುವಾಗ, ರಾಜ್ಯದಲ್ಲಿ‌ ಕಾಂಗ್ರೆಸ್ ಪಕ್ಷ ಇಕ್ಕಟ್ಟಿಗೆ ಸಿಲುಕಿರುವ ಸಮಯದಲ್ಲಿ ವಿದೇಶಕ್ಕೆ ಪ್ರವಾಸ ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂಬ ಆಕ್ಷೇಪಗಳು ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ.



Join Whatsapp