ಮೇಪ್ಪಾಡಿ: ವಯನಾಡು ಜಿಲ್ಲೆಯಾದ್ಯಂತ ಸಂಭವಿಸಿರುವ ಸರಣಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 300ರ ಗಡಿ ದಾಟಿದ್ದರೂ, ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಇದರ ಬೆನ್ನಲ್ಲೇ, ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ‘ವಿಪತ್ತು ಪೀಡಿತ’ ಪ್ರದೇಶ ಎಂದು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
‘ಈ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಒತ್ತಾಯಿಸಿ ನಾವು (ಸಚಿವ ಸಂಪುಟ) ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆದರೆ, ಅವರು ಸಿದ್ಧರಿಲ್ಲ. ಕಾನೂನಾತ್ಮಕ ಸಮಸ್ಯೆಗಳಿವೆ ಎಂದು ಹೇಳುತ್ತಾರೆ. ನಾವು ಇದನ್ನು ‘ರಾಜ್ಯ ವಿಪತ್ತು’ ಎಂದು ಘೋಷಿಸಲಿದ್ದೇವೆ’ ಎಂದು ಕೇರಳ ಕಂದಾಯ ಸಚಿವ ಕೆ.ರಾಜನ್ ತಿಳಿಸಿದ್ದಾರೆ.