ತುಂಗಾ ಜಲಾಶಯ ಸಂಪೂರ್ಣ ಭರ್ತಿ: ಇಂದಿನಿಂದ 1 ತಿಂಗಳು ಡ್ಯಾಂ ಸುತ್ತಮುತ್ತ ನಿಷೇಧಾಜ್ಞೆ

Prasthutha|

ಶಿವಮೊಗ್ಗ: ಜಿಲ್ಲೆಯ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಸುರಕ್ಷತೆ, ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ 1 ತಿಂಗಳ ಕಾಲ ಡ್ಯಾಂ ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

- Advertisement -

ಈ ಕುರಿತಂತೆ ಆದೇಶ ಹೊರಡಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ತುಂಗಾ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದ್ದು, ಸದರಿ ಜಲಾಶಯದಿಂದ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರಬಿಡಲಾಗುತ್ತಿದ್ದು, ತುಂಗಾ ಜಲಾಶಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಬಾಗಿನ ಅರ್ಪಿಸಲು ಮುಖಂಡರುಗಳು, ರೈತರುಗಳು ಜಲಾಶಯ ವೀಕ್ಷಣೆಗೆ ಬರುತ್ತಿದ್ದು, ಜಲಾಶಯದ ಹಿತದೃಷ್ಟಿಯಿಂದ ಸುರಕ್ಷೆ ವಹಿಸುವುದು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ತುಂಗಾ ಜಲಾಶಯದ ಸುತ್ತ-ಮುತ್ತ ಪ್ರದೇಶದ ವ್ಯಾಪ್ತಿಯಲ್ಲಿ ದಿನಾಂಕ: 03.08.2024 ರಿಂದ ದಿನಾಂಕ: 02.09.2024 ರವರೆಗೆ ಸಿ ಆರ್ ಪಿ ಸಿ ಕಲಂ 144 ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸುವಂತೆ ಕೋರಿರುತ್ತಾರೆ ಎಂದಿದ್ದಾರೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ದಿನಾಂಕ: 31.07.2024 ರ ಹವಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ, ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ದಿನಾಂಕ: 03.08.2024 ರಿಂದ ದಿನಾಂಕ: 02.09.2024 ರವರೆಗೆ ತುಂಗಾ ಜಲಾಶಯದ ಪ್ರದೇಶದ ಸುತ್ತ-ಮುತ್ತಲು 500 ಮೀ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 163 ರಂತೆ ನಿಷೇದಾಜ್ಞೆ ಜಾರಿಗೊಳಿಸುವುದು ಸೂಕ್ತವೆಂದು ಕಂಡು ಬಂದಿರುವುದರಿಂದ ಈ ಕೆಳಕಂಡಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

- Advertisement -

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 163 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗುರುದತ್ತ ಹೆಗಡೆ ಭಾ.ಆ.ಸೇ., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಜಲಾಶಯದ ಹಾಗೂ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ: 03.08.2024 ರಿಂದ 02.09.2024 ರವರೆಗೆ ತುಂಗಾ ಜಲಾಶಯದ ಪ್ರದೇಶದ ಸುತ್ತ-ಮುತ್ತಲು 500 ಮೀ ವ್ಯಾಪ್ತಿಯಲ್ಲಿ ಈ ಕೆಳಕಂಡ ನಿಬಂಧನೆಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿದ್ದಾರೆ.

ನಿಬಂಧನೆಗಳು:-
1.ಐದು (05) ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.

  1. ತುಂಗಾ ನದಿಯಲ್ಲಿ ನೀರಿಗೆ ಇಳಿಯುವುದನ್ನು, ಪೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.
  2. ಜಲಾಶಯವು ಸಂರಕ್ಷಿತಾ ಪ್ರದೇಶವಾಗಿರುವುದರಿಂದ, ಸದರಿ ಗೇಟಿನಲ್ಲಿ ಗುಂಪುಗೂಡುವುದು, ಡ್ಯಾಂ ನ ಮೇಲೆ ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
  3. ಜಲಾಶಯದ ಸೆಕ್ಯೂರಿಟಿ, ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಉಂಟು ಮಾಡುವಂತಿಲ್ಲ.
  4. ಬಾಗಿನ ನೀಡಲು ಬರುವವರು ನೀರಿನಲ್ಲಿ ಇಳಿಯುವಂತಿಲ್ಲ ಹಾಗೂ ಈಜಾಡುವಂತಿಲ್ಲ.
  5. ನಿಷೇಧಾಜ್ಞೆ ಸಮಯದಲ್ಲಿ ಆಯುಧ, ಶಸ್ತ್ರಾಸ್ತ್ರಗಳು ಮತ್ತು ಮಾರಕಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಿದೆ.
  6. ಯಾವುದೇ ರೀತಿಯ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡತಕ್ಕದ್ದಲ್ಲ.
  7. ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023, ಕಲಂ 223 ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂಬುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.



Join Whatsapp