ಪೊಲೀಸ್ ಠಾಣೆ ಬಳಿ ಬಿಜೆಪಿ ಹೈಡ್ರಾಮ: ಪುನೀತ್ ಕೆರೆಹಳ್ಳಿ ಮತ್ತೆ ವಶಕ್ಕೆ, ಪ್ರತಾಪ್ ಸಿಂಹ ವಿರುದ್ಧ ದೂರು

Prasthutha|

ಬೆಂಗಳೂರು: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಸವೇಶ್ವರ ನಗರದ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

- Advertisement -

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿ, ಜಾಮೀನು ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿದ್ದಾರೆ ಎಂದು ಎಸಿಪಿ ಚಂದನ್ ವಿರುದ್ಧ ಪ್ರತಾಪ್ ಸಿಂಹ ಆರೋಪ ಮಾಡಿದ್ದರು. ಹೀಗಾಗಿ ಪ್ರತಿಭಟನೆ ನಿಯಂತ್ರಿಸಲು ಪುನೀತ್ ಕೆರೆಹಳ್ಳಿಯನ್ನು ಬಸವೇಶ್ವರನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜು.26ರಂದು ರಾತ್ರಿ ಅಕ್ರಮವಾಗಿ ಮಾಂಸ ಬರುತ್ತಿದೆ ಎಂಬ ಮಾಹಿತಿ ಇತ್ತು. ಈ ಹಿಂದೆ ಎಲ್ಲರಿಗೂ ದೂರು ನೀಡಿದೂ ಪ್ರಯೋಜನೆ ಆಗಿರಲಿಲ್ಲ. ಹೀಗಾಗಿ ಪುನೀತ್ ಕೆರೆಹಳ್ಳಿ ಸ್ಥಳಕ್ಕೆ ಹೋಗಿದ್ದರು. ಆಗ ಅಬ್ದುಲ್ ರಜಾಕ್ ಸ್ಥಳಕ್ಕೆ ಬಂದಿದ್ದಾರೆ. ಮಾಂಸದ ಬಾಕ್ಸ್ ಓಪನ್ ಮಾಡಲು ಅಬ್ದುಲ್ ರಜಾಕ್ ಒಪ್ಪಿಲ್ಲ. ಸ್ಥಳಕ್ಕೆ ಪೊಲೀದರು ಬಂದು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದು, ಕಾಟನ್ ಪೇಟೆ ಠಾಣೆಯಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಆರೋಪ ಮಾಡಿದ್ದಾರೆ. ಪುನೀತ್ ಅಲ್ಲಿಗೆ ಹೋಗಿದ್ದು ತಪ್ಪಾ ಎಂದು ಪ್ರಶ್ನಿಸಿದರು.

- Advertisement -

ಮಾಂಸ ಸಾಗಾಟಕ್ಕೆ ತಡೆ ಪ್ರಕರಣದಲ್ಲಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿಗೆ ಲಾಕಪ್ ನಲ್ಲಿ ಬಟ್ಟೆ ಬಿಚ್ಚಿಸಿ, ಹಿಂಸೆ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ಎಸಿಪಿ ಚಂದನ್‌ ಗೆ ಸಾಮಾಜಿಕ ಜಾಲತಾಣದಲ್ಲಿ ಬೇದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಆಮ್ ಆದ್ಮಿ ಪಾರ್ಟಿ ಯುವ ಘಟಕದಿಂದ ಪಶ್ಚಿಮ ಡಿಸಿಪಿಗೆ ದೂರು ನೀಡಲಾಗಿದೆ. ಪುನೀತ್ ಕೆರೆಹಳ್ಳಿ ಬಂಧನಕ್ಕೆ ಸಂಬಂಧಿಸಿ ಪ್ರತಾಪ್ ಸಿಂಹ ಟ್ವೀಟ್‌ ಮಾಡಿ, ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಾರ್ಟಿಯ ಯುವ ಘಟಕ ಅಧ್ಯಕ್ಷ ಲೋಹಿತ್ ಕುಮಾರ್ ದೂರು ನೀಡಿದ್ದಾರೆ.



Join Whatsapp