ವಯನಾಡು ಪ್ರಾಕೃತಿಕ ದುರಂತ ಮಾನವ ನಿರ್ಮಿತ: ಮಾಧವ್ ಗಾಡ್ಗೀಳ್

Prasthutha|

ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತವನ್ನು ಪರಿಸರತಜ್ಞ ಮಾಧವ್ ಗಾಡ್ಗೀಳ್ ಅವರು ಮಾನವ ನಿರ್ಮಿತ ಎಂದು ಕರೆದಿದ್ದಾರೆ.

- Advertisement -


ಈ ದುರಂತವನ್ನು ಮಾನವ ನಿರ್ಮಿತ ಎಂದಿರುವ ಮಾಧವ್, ಪರಿಸರಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಜಾರಿಗೊಳಿಸಲು ಕೇರಳ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
‘ದಿ ಹಿಂದೂ’ ಜತೆ ಮಾತನಾಡಿರುವ ಅವರು, ಹವಾಮಾನ ವೈಪರೀತ್ಯದ ನಡುವೆ ಇಂತಹ ವಿಪತ್ತುಗಳನ್ನು ತಡೆಗಟ್ಟಲು ವಿನ್ಯಾಸಗೊಳಿಸಿದ ಸಮಿತಿಯ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ. ಪರಿಸರ ಸೂಕ್ಷ್ಮ ವಲಯಗಳು – I ಮತ್ತು ಪರಿಸರ ಸೂಕ್ಷ್ಮ ವಲಯಗಳು – II ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಸ್ಪಷ್ಟವಾದ ನಿರ್ಬಂಧಗಳು ಮತ್ತು ನಿಬಂಧನೆಗಳು ಇದ್ದವು. ಮಂಗಳವಾರ ವಯನಾಡಿನ ಬೇರೆ ಬೇರೆ ಕಡೆಗಳಲ್ಲಿ ಸಂಭವಿಸಿದ ಭೂಕುಸಿತಕ್ಕೆ ಇದುವರೆಗೆ 150ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ ಎಂದು ಹೇಳಿದ್ದಾರೆ.


ದುರಂತ ಸಂಭವಿಸಿದ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಕ್ವಾರಿಗಳು ಕಾರ್ಯನಿರ್ವಹಿಸುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ಗಾಡ್ಗೀಳ್ ಹೇಳಿದ್ದಾರೆ. ಈ ಕ್ವಾರಿಗಳು ಈಗ ನಿಷ್ಕ್ರಿಯವಾಗಿದ್ದರೂ ಅವುಗಳ ಕಾರ್ಯಾಚರಣೆಯ ಅವಧಿಯಲ್ಲಿ ಉಂಟಾದ ಆಘಾತದ ಅಲೆಗಳು ವಿಪತ್ತು ಪೀಡಿತ ಪ್ರದೇಶಗಳಿಗೆ ವಿಸ್ತರಿಸಿರಬಹುದು, ಭಾರಿ ಮಳೆಯ ಸಂದರ್ಭದಲ್ಲಿ ಭೂಕುಸಿತಕ್ಕೆ ಪ್ರಚೋದನೆ ನೀಡಬಹುದು ಎಂದು ಗಾಡ್ಗೀಳ್ ಅಭಿಪ್ರಾಯಪಟ್ಟಿದ್ದಾರೆ.

- Advertisement -


ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ESAs) ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು 13 ವರ್ಷಗಳ ಹಿಂದೆಯೇ ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ಆಗಸ್ಟ್ 2011 ರಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಮಂಗಳವಾರ ಭೂಕುಸಿತ ಸಂಭವಿಸಿದ ವಯನಾಡಿನ ಮೆಪ್ಪಾಡಿ ಹೆಸರು ಕೂಡ ವರದಿಯಲ್ಲಿದೆ. ಅಲ್ಲಿ ಪರಿಸರ ವಿರೋಧಿ ಚಟುವಟಿಕೆಗಳ ವಿರುದ್ಧ ಸಮಿತಿ ಅಂದೇ ಎಚ್ಚರಿಕೆ ನೀಡಿತ್ತು.



Join Whatsapp