ಮೈಸೂರು: ಬೆಂಗಳೂರಿನ ಮಾಂಸ ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ ಬಂಧನ ವಿರೋಧಿಸಿ ಎಸಿಪಿ ಚಂದನ್ ಅವರ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ಹಲ್ಲೆ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆಯಾಗಿದ್ದಾನೆ, ಆತನನ್ನು ಠಾಣೆಯಲ್ಲಿ ಬೆತ್ತಲೆಗೊಳಿಸಿ ಹಿಂಸೆ ಕೊಟ್ಟಿರುವ ಎಸಿಪಿ ಚಂದನ್, ನಾಳೆ ಸ್ಟೇಷನ್‌ಗೆ ಬರ್ತೀನಿ, ನೀವು ಇರಬೇಕು’ ಎಂದಿದ್ದಾರೆ.
ಎಸಿಪಿ ಚಂದನ್ ಕೆಲ ಸಮಯಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್ ಅವರನ್ನು ಬಂಧಿಸಿದ್ದರು. ಎಸಿಪಿ ಚಂದನ್ ಪ್ರಕರಣದ ತನಿಖಾರಿಯಾಗಿದ್ದು ಯಾವುದೇ ಒತ್ತಡಗಳಿಗೂ ಮಣಿಯದೇ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ
ಪ್ರತಾಪ್ ಸಿಂಹ ಅವರು ಎಸಿಪಿ ಚಂದನ್ ವಿರುದ್ಧ ಪುನೀತ್ ಕೆರೆಹಳ್ಳಿಗೆ ಠಾಣೆಯಲ್ಲಿ ಬೆತ್ತಲೆಗೊಳಿಸಿ ಹಿಂಸೆ ನೀಡಿರುವ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆ ನಡೆದಿದೆ.
ಪ್ರತಾಪ್ ಸಿಂಹ ಸಮಾಜಘಾತುಕನ ಪರವಹಿಸಿ ಆತನನ್ನು ಸಹೋದರ ಎಂದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ದಕ್ಷ ಅಧಿಕಾರಿ ಚಂದನ್ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಮತ್ತು ಅವರಿಗೆ ಬೆದರಿಕೆ ರೂಪದಲ್ಲಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ ಎಂದು ವಿರೋಧ ವ್ಯಕ್ತವಾಗಿದೆ. ಅಲ್ಲದೇ ದರ್ಶನ್ ಅಭಿಮಾನಿಗಳ ಬೆಂಬಲ ಗಳಿಸಲು ಎಸಿಪಿ ಚಂದನ್ ವಿರುದ್ಧ ಸುಳ್ಳಾರೋಪ ಹೊರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.