ನವದೆಹಲಿ: ಸಂಸತ್ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿರಬೇಕಾದರೆ, ನಿರ್ಮಲಾ ಸೀತಾರಾಮನ್ ತಲೆ ಚಚ್ಚಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ.
ಕೇಂದ್ರ ಬಜೆಟ್ ನ್ನು ಮಧ್ಯಮ ವರ್ಗ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಟೀಕಾ ಪ್ರಹಾರ ನಡೆಸಿದರು.
ಬಜೆಟ್ ತಯಾರಿಕೆಯ ತಂಡದಲ್ಲಿ ವೈವಿಧ್ಯತೆಯ ಕೊರತೆಯ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಜೆಟ್ ಪೂರ್ವದಲ್ಲಿ ನಡೆಯುವ ಸಾಂಪ್ರದಾಯಿಕ ಹಲ್ವಾ ಸಮಾರಂಭದ ಪೋಸ್ಟರ್ ನ್ನು ಪ್ರದರ್ಶಿಸಿದ್ದು, ಬಜೆಟ್ ತಯಾರಿಕೆಯ ತಂಡದಲ್ಲಿದ್ದ 20 ಅಧಿಕಾರಿಗಳ ಪೈಕಿ ದಲಿತರು, ಒಬಿಸಿ, ಆದಿವಾಸಿಗಳ ಅನುಪಸ್ಥಿತಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದರು.
ಈ ಫೋಟೋದಲ್ಲಿ ಬಜೆಟ್ ಹಲ್ವಾ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಒಬ್ಬ ಒಬಿಸಿ, ಬುಡಕಟ್ಟು ಅಥವಾ ದಲಿತ ಅಧಿಕಾರಿಯೂ ಕಾಣುತ್ತಿಲ್ಲ. ದೇಶದ ಹಲ್ವಾ ವನ್ನು ವಿತರಣೆ ಮಾಡಲಾಗುತ್ತಿದೆ ಆದರೆ ಅದರಲ್ಲಿ ಶೇ.73 ರಷ್ಟು ಪ್ರಾತಿನಿಧ್ಯ ಇಲ್ಲವೇ ಇಲ್ಲ. 20 ಅಧಿಕಾರಿಗಳು ದೇಶದ ಬಜೆಟ್ ನ್ನು ತಯಾರಿಸಿದ್ದಾರೆ. ಹಿಂದೂಸ್ಥಾನದ ಹಲ್ವಾ ವಿತರಣೆ 20 ಜನರು ವಿತರಣೆ ಮಾಡುವ ಕೆಲಸವೆ? ಎಂದು ದೇಶದ ಬಹುಸಂಖ್ಯಾತ ಜನಸಂಖ್ಯೆಯನ್ನು ಬಜೆಟ್ ನಿಂದ ಹೊರಗಿಡಲಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳಲು ಯತ್ನಿಸಿದರು.
ರಾಹುಲ್ ಗಾಂಧಿಯ ಈ ಮಾತಿಗೆ ನಿರ್ಮಲಾ ಸೀತಾರಾಮನ್ ಹತಾಶರಾಗಿ ತಲೆ ಮೇಲೆ ಕೈ ಇಟ್ಟುಕೊಂಡು ತಲೆ ಚಚ್ಚಿಕೊಂಡ ವಿಡಿಯೋ ಈಗ ವೈರಲ್ ಆಗತೊಡಗಿದೆ.