ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲ್ಗುಣ ಸರಿ ಇಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. ಅವರು ಬಂದರೆ ಮಳೆ ಬರುವುದಿಲ್ಲ ಎನ್ನುತ್ತಿದ್ದರು. ಈಗ ಏನಾಗಿದೆ ನೋಡಿ?’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಎಲ್ಲಾ ಜಲಾಶಯಗಳೂ ಭರ್ತಿಯಾಗಿವೆ. ತಮಿಳುನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚು ನೀರು ಹರಿದು ಹೋಗಿದೆ. ಎರಡೂ ರಾಜ್ಯದವರೂ ಸಂತೋಷವಾಗಿದ್ದಾರೆ. ಎರಡೂ ರಾಜ್ಯಗಳಲ್ಲಿ ಕೆರೆ– ಕಟ್ಟೆಗಳು ತುಂಬಿವೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಸಿದ್ದರಿದ್ದೇವೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಕೇಂದ್ರದವರು ಮಧ್ಯಸ್ಥಿಕೆ ವಹಿಸಲಿ’ ಎಂದು ಹೇಳಿದರು.