►ಕಾಣೆಯಾದವರ ಪತ್ತೆಗೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಹುಡುಕಿ: ಕೇರಳ ಸಚಿವ ಒತ್ತಾಯ
ಉತ್ತರ ಕನ್ನಡ: ಅಂಕೋಲಾದ ಶಿರೂರು ಭೂಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಶಿರೂರು ಭೂಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಪ್ರತಿಕೂಲ ವಾತಾವರಣ ಮತ್ತು ಭಾರಿ ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಮಾಹಿತಿ ನೀಡಿದ್ದು, ನಿನ್ನೆ ಮೂರು ಹಾಗೂ ಇವತ್ತು ಒಂದು ಪಾಯಿಂಟ್ನಲ್ಲಿ ಹುಡುಕಾಟ ಮಾಡಲಾಗಿದೆ. ಆದರೆ ಎಲ್ಲೂ ಲಾರಿ ಸಿಕ್ಕಿಲ್ಲ, ಕಣ್ಮರೆಯಾಗಿರುವರೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ವೇಳೆ ಕಲ್ಲು, ಮರದ ತುಂಡುಗಳು ಅಡ್ಡಿಯಾಗಿದ್ದಾಗಿ ಮುಳುಗು ತಜ್ಞರು ತಿಳಿಸಿದ್ದಾರೆ. ನೀರಿನ ಹರಿವು ಸಹ ಹೆಚ್ಚಾಗಿರುವುದರಿಂದ ಶೋಧ ಕಾರ್ಯ ನಡೆಸಲಾಗಿಲ್ಲ.ಪ್ರತಿಕೂಲ ವಾತಾವರಣ ಮತ್ತು ಭಾರಿ ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಮುಂದಿನ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಶಿರೂರು ಭೂಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಅವರ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕೇರಳ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಝ್ ನಿರಾಶೆ ವ್ಯಕ್ತಪಡಿಸಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುವ ಮಿತಿಗಳನ್ನು ಮರು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ ರಿಯಾಝ್, ನೌಕಾ ನೆಲೆಯಿಂದ ಅತ್ಯುತ್ತಮ ಮುಳುಗು ತಜ್ಞರನ್ನು ನಿಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದರು. ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಇನ್ನೂ ಹಲವು ಸಾಧ್ಯತೆಗಳಿವೆ. ಎಲ್ಲರೂ ಚರ್ಚಿಸಿದ ನಿರ್ಣಯವನ್ನು ಜಾರಿಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.