ಪಾಟ್ನಾ: ರೈಲಿನಲ್ಲಿದ್ದ ಯುವಕನ ಮೇಲೆ ಜಿಆರ್‌ಪಿ ಸಿಬ್ಬಂದಿ ಹಲ್ಲೆ ನಡೆಸಿದ್ದು, ಆತನ ಕರುಳು ಕಿತ್ತು ಬಂದ ಆಘಾತಕಾರಿ ಘಟನೆ ಬಿಹಾರದ ಸೀತಮರ್ಹಿ ಜಿಲ್ಲೆಯ ಪುಪ್ರಿ ಪ್ರದೇಶದ ಜನಕ್‌ಪುರ ರೋಡ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಗಧಾ ಗ್ರಾಮದ ಮುಹಮ್ಮದ್ ಗುಲಾಬ್ ಅವರ ಪುತ್ರ 25 ವರ್ಷದ ಮುಹಮ್ಮದ್ ಫುರ್ಕಾನ್
ಗಂಭೀರವಾಗಿ ಗಾಯಗೊಂಡ ಯುವಕ. ಫುರ್ಕಾನ್‌ನನ್ನು ಆಸ್ಪತ್ರೆಗೆ ಸಾಗಿಸುವ ವಿಡಿಯೊ ವೈರಲ್ ಆಗಿದ್ದು, ಜಿಆರ್‌ಪಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಫುರ್ಕಾನ್‌ನನ್ನು ಪುಪ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ವ್ಯಕ್ತಿಗಳು ಗಂಭೀರ ಗಾಯಗೊಂಡ ಫುರ್ಕಾನ್ ಅನ್ನು ಹೊತ್ತೊಯ್ಯುತ್ತಿರುವುದು ಮತ್ತು ಜನರ ಗುಂಪು ಅವರನ್ನು ಹಿಂಬಾಲಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಜತೆಗೆ ‘ಪೊಲೀಸರು ಅವನನ್ನು ಎಷ್ಟು ಕೆಟ್ಟದಾಗಿ ಥಳಿಸಿದ್ದಾರೆ ಎನ್ನುವುದನ್ನು ನೋಡಿ’ ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ಕೇಳಬಹುದು. ಮೊಹಮ್ಮದ್ ಫುರ್ಕಾನ್ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬೈಗೆ ಹೋಗುತ್ತಿದ್ದ ತನ್ನ ಚಿಕ್ಕಮ್ಮನನ್ನು ಬೀಳ್ಕೊಡಲು ಆಗಮಿಸಿದ್ದ ವೇಳೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಘಟನೆ ವಿವರ
ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಫುರ್ಕಾನ್‌ನ ಹೊಟ್ಟೆಯ ಮೇಲೆ ಜಿಆರ್‌ಪಿ ಸಿಬ್ಬಂದಿ ಕೋಲಿನಿಂದ ಹಲವು ಬಾರಿ ಹೊಡೆದಿದ್ದಾನೆ. ಇದರಿಂದಾಗಿ ಹೊಟ್ಟೆ ಒಡೆದು ಕರುಳು ಹೊರಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ʼʼನನ್ನ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ನಡೆದಿದೆ. ನೋವಾಗುತ್ತಿದೆ ಎಂದು ಪದೇ ಪದೆ ಹೇಳುತ್ತಿದ್ದರೂ ಜಿಆರ್‌ಪಿ ಸಿಬ್ಬಂದಿ ಕೋಲಿನಿಂದ ಹೊಡೆಯುತ್ತಲೇ ಇದ್ದರುʼʼ ಎಂದು ಮೊಹಮ್ಮದ್ ಫುರ್ಕಾನ್ ತಿಳಿಸಿದ್ದಾನೆ.
ಹೊರಬಂದ ಕರುಳು
ಫುರ್ಕಾನ್ ಸುಮಾರು ಎರಡು ವರ್ಷಗಳ ಹಿಂದೆ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಶಸ್ತ್ರಚಿಕಿತ್ಸೆಗೊಳಗಾದ ಭಾಗದ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತನ ಹೊಟ್ಟೆ ಎಡಭಾಗ ತೆರೆದುಕೊಂಡಿತು ಮತ್ತು ಅದರಿಂದ ಕರುಳು ಹೊರಬಂದಿದೆ ಎಂದು ಮೂಲಗಳು ತಿಳಿಸಿವೆ.
ಜಿಆರ್‌ಪಿ ಸಿಬ್ಬಂದಿ ವಿರುದ್ಧ ಆಕ್ರೋಶ
ಘಟನೆ ಬೆಳಕಿಗೆ ಬಂದ ಬಳಿಕ ಜಿಆರ್‌ಪಿ ಸಿಬ್ಬಂದಿಯ ಅನಾಗರಿಕ ವರ್ತನೆಯಿಂದ ಕೋಪಗೊಂಡ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಜನಕ್‌ಪುರ ರಸ್ತೆ ನಿಲ್ದಾಣವನ್ನು ಧ್ವಂಸಗೊಳಿಸಿದ್ದಾರೆ.