ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರದಂದು NITI ಆಯೋಗ 9 ನೇ ಆಡಳಿತ ಮಂಡಳಿಯ ಸಭೆಯಿಂದ ಅರ್ಧಕ್ಕೆ ಎದ್ದುಬಂದಿದ್ದಾರೆ. ಸಭೆಯಲ್ಲಿ ಮೈಕ್ ಆಫ್ ಮಾಡುವ ಮೂಲಕ ಮಾತನಾಡದಂತೆ ತಡೆಹಿಡಿಯಲಾಯಿತು ಎಂದು ಆರೋಪಿಸಿದ್ದಾರೆ.
2024-25ರ ಕೇಂದ್ರ ಬಜೆಟ್ ಅನ್ನು ಪ್ರತಿಭಟಿಸಲು ಹಲವಾರು ವಿರೋಧ-ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯನ್ನು ಬಹಿಷ್ಕರಿಸಿದ್ದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಸ್ಥೆ ಮಾತ್ರ ಸಭೆಗೆ ಹಾಜರಾಗಿದ್ದರು. ಸಭೆಯಿಂದ ಹೊರಗೆ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ನಾನು ಮಾತನಾಡುವಾಗ ಮೈಕ್ ಆಫ್ ಮಾಡಲಾಗಿತ್ತು ಎಂದು ಆರೋಪಿಸಿದರು. 2024-25ನೇ ಸಾಲಿನ ಕೇಂದ್ರ ಬಜೆಟ್ ಪಕ್ಷಪಾತವಾಗಿದೆ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು.
“ನಾನು ಸಭೆ ಬಹಿಷ್ಕರಿಸಿ ಹೊರಬಂದಿದ್ದೇನೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸ್ಗಢ ಮುಖ್ಯಮಂತ್ರಿಗಳು 10–12 ನಿಮಿಷಗಳ ಕಾಲ ಮಾತನಾಡಿದರು. ಕೇವಲ ಐದು ನಿಮಿಷಗಳ ನಂತರ ನನ್ನನ್ನು ಮಾತನಾಡದಂತೆ ತಡೆಯಲಾಯಿತು. ಇದು ನ್ಯಾಯಯುತವಾದದ್ದಲ್ಲ. ಪ್ರತಿಪಕ್ಷಗಳ ಕಡೆಯಿಂದ ನಾನು ಮಾತ್ರ ಹಾಜರಾಗಿದ್ದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಕಾರಣಕ್ಕಾಗಿ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ, ನಾನು ಮಾತನಾಡದಂತೆ ತಡೆಹಿಡಿಯಲಾಯಿತು ಎಂದು ಹೇಳಿದರು.
ನಾನು ಮಾತನಾಡುವಾಗ ಮೈಕ್ ನಿಲ್ಲಿಸಿ, ನನ್ನನ್ನೇಕೆ ತಡೆದಿರಿ?ಯಾಕೆ ತಾರತಮ್ಯ ಮಾಡುತ್ತಿದ್ದೀರಿ?ನಾನು ಸಭೆಗೆ ಹಾಜರಾಗುತ್ತಿದ್ದೇನೆ.ನೀವು ಸಂತೋಷವಾಗಿರಬೇಕು.ಬದಲಾಗಿ ನಿಮ್ಮ ಪಕ್ಷಕ್ಕೆ ಮತ್ತು ನಿಮ್ಮ ಸರಕಾರಕ್ಕೆ ಹೆಚ್ಚಿನ ಸ್ಕೋಪ್ ನೀಡುತ್ತಿದ್ದೀರಿ. ನಾನು ಮಾತ್ರ ವಿರೋಧ ಪಕ್ಷದಲ್ಲಿದ್ದೇನೆ ಮತ್ತು ನೀವು ನನ್ನನ್ನು ಮಾತನಾಡದಂತೆ ತಡೆಯುತ್ತಿದ್ದೀರಿ. ಇದು ಬಂಗಾಳಕ್ಕೆ ಮಾತ್ರವಲ್ಲದೆ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೂ ಅವಮಾನವಾಗಿದೆ, ”ಎಂದು ಕೇಂದ್ರ ಸರ್ಕಾರದ ಕಿಡಿಕಾರಿದರು.