ನೀಟ್‌ನಿಂದ ಹೊರಬರಲು ಕರ್ನಾಟಕ ನಿರ್ಣಯ | ನನಗೆ ಸಿಕ್ಕಿದ ಜಯ : ಐವನ್ ಡಿಸೋಜಾ

Prasthutha|

►”ನೀಟ್ ಪರೀಕ್ಷೆ ಕೇಂದ್ರ ಸರಕಾರದ ದೊಡ್ಡ ದಂಧೆ”

- Advertisement -

ಮಂಗಳೂರು : ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ನೀಟ್ ಪರೀಕ್ಷೆಯ ಅಕ್ರಮದ ಬಗ್ಗೆ ನಾನು ಮೊದಲು ಪ್ರಸ್ತಾಪ ಮಾಡಿದ್ದೆ. ಈಗ ನೀಟ್ ಪರೀಕ್ಷೆಯಿಂದ ಹೊರಬರಲು ಕರ್ನಾಟಕ ಸರಕಾರ ನಿರ್ಣಯ ಅಂಗೀಕರಿಸಿದೆ. ಇದು ನನಗೆ ಸಿಕ್ಕಿದ ಜಯ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ‘ನಾನು ಈ ಬಾರಿ 45 ಪ್ರಶ್ನೆಗಳನ್ನು ಕೇಳಿದ್ದೆ, ಅದರಲ್ಲಿ ನೀಟ್‌ಗೆ ಸಂಬಂಧಿಸಿ ಮೊದಲ ಪ್ರಶ್ನೆ ಕೇಳಿದ್ದೆ, ಇದಿಈಗ ಕರ್ನಾಟಕ‌ ಸರಕಾರ ನೀಟ್‌ನಿಂದ ಹೊರಬರಲು ನಿರ್ಣಯ ತೆಗೆದುಕೊಂಡಿದೆ, ಅದಕ್ಕಾಗಿ‌ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

- Advertisement -

ನೀಟ್‌ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರ ಸರಕಾರದ ಪಾತ್ರ ಇಲ್ಲದೆ ಇಷ್ಟು ದೊಡ್ಡ ಅಕ್ರಮ ನಡೆಯಲು‌ ಸಾಧ್ಯವಾಗುತ್ತಿರಲಿಲ್ಲ, ನೀಟ್ ಪರೀಕ್ಷೆ ಕೇಂದ್ರ‌ ಸರಕಾರದ ದೊಡ್ಡ ದಂಧೆಯಾಗಿದ್ದು ಶ್ರೀಮಂತರಿಗೆ ಸಹಾಯ ಮಾಡಲು ಕೇಂದ್ರ ಸರಕಾರ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲುಹಾಕಿದೆ ಎಂದು ಅವರು ಆರೋಪಿಸಿದರು.

ನೀಟ್ ಪರೀಕ್ಷೆ ಅಕ್ರಮಗಳಿಗೆ ಕೇಂದ್ರ ಸರಕಾರ ಹೊಣೆ ಅಲ್ಲದಿದ್ದರೆ ಅವರು ಪರೀಕ್ಷೆ ಯಾಕೆ ನಡೆಸಬೇಕು ಎಂದು ಪ್ರಶ್ನಿಸಿದ ಐವನ್ ಡಿಸೋಜಾ, ಪರೀಕ್ಷೆಗಳನ್ನು ರಾಜ್ಯಗಳಿಗೆ ಬಿಟ್ಟುಕೊಡಿ ಎಂದು ಮನವಿ ಮಾಡಿದರು.

ಕರ್ನಾಟಕದ‌ ಸಂಸದರು ಸಂಸತ್ ಕಲಾಪದಲ್ಲಿ ನೀಟ್ ವಿರುದ್ಧ ಧ್ವನಿ ಎತ್ತಬೇಕು, ಎಲ್ಲಾ ರಾಜ್ಯಗಳು ನೀಟ್ ನಿಂದ ಹೊರಗೆ ಬರಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಪಾಲಿಕೆ ಸದಸ್ಯ ನವೀನ್ ಡಿಸೋಜಾ, ಯುವ ಕಾಂಗ್ರೆಸ್ ಮುಖಂಡ ಗಿರೀಶ್ ಆಳ್ವ, NSUI ಮುಖಂಡ ಕ್ರಿಸ್ಟನ್ ಮಿನೇಜಸ್ ಸೇರಿ ಇತರರು ಹಾಜರಿದ್ದರು.



Join Whatsapp