ಕಲ್ಲಡ್ಕ ಪ್ರಭಾಕರ್ ಭಟ್, ರಾಘವೇಶ್ವರ ವಿರುದ್ಧ ಚಾರ್ಜ್’ಶೀಟ್ ರದ್ದು..!

Prasthutha|

►ಮೇಲ್ಮನವಿಗೆ ‘ಯೋಗ್ಯ ಪ್ರಕರಣವಲ್ಲ’ ಎಂದ ರಾಜ್ಯ ಸರ್ಕಾರ

- Advertisement -


ಬೆಂಗಳೂರು: ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ದೋಷಾರೋಪಣೆ ಪಟ್ಟಿ ರದ್ದುಪಡಿಸಿ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ‘ಯೋಗ್ಯ ಪ್ರಕರಣವಲ್ಲ’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ತೀರ್ಮಾನಿಸಿದೆ ಎಂದು ‘ದಿ ಫೈಲ್’ ವರದಿ ಮಾಡಿದೆ.


ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ನಾಲ್ಕು ತಿಂಗಳಲ್ಲಿ ಈ ಆದೇಶ ಹೊರಬಿದ್ದಿದೆ.

- Advertisement -


ಗೃಹ ಇಲಾಖೆಯಡಿಯಲ್ಲಿರುವ ಪ್ರಾಸಿಕ್ಯೂಷನ್ ಇಲಾಖೆಯು 2023ರ ಸೆ.22ರಂದು ಹೊರಡಿಸಿರುವ ಆದೇಶದ ಪ್ರತಿ
ಅಭಿಯೋಜನಾ ಇಲಾಖೆ ಮಾತ್ರವಲ್ಲ, ಸರ್ಕಾರಿ ವಕೀಲರು ಸಹ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವಲ್ಲ ಎಂದು ಅಭಿಪ್ರಾಯಿಸಿದ್ದರು. ಸರ್ಕಾರಿ ವಕೀಲರ ಅಭಿಪ್ರಾಯವನ್ನೇ ಎತ್ತಿ ಹಿಡಿದಿದ್ದ ಸರ್ಕಾರವು ಈ ಸಂಬಂಧ ಆದೇಶವನ್ನೂ (HD/11172/HCP1/2023 (COMPUTER NUMBER 1182854) (3571/AG-G-CRL/23-24- CRL R.P. NO 400/2014, HKCK-BENGALURU-DHARMA V/S STATE) ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ದೂರುದಾರರಾದ ಸಂಧ್ಯಾಲಕ್ಷ್ಮಿ ಎಂಬುವರು ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ (ಎಸ್ಎಲ್ಪಿ ಕ್ರಿಮಿನಲ್ ಅರ್ಜಿ ಸಂಖ್ಯೆ 4309-4310/2024) ಸಲ್ಲಿಸಿದ್ದಾರೆ. ಇದರಲ್ಲಿ ಕರ್ನಾಟಕ ಸರ್ಕಾರವನ್ನು ಎರಡನೇ ಪ್ರತಿವಾದಿಯನ್ನಾಗಿಸಿದ್ದಾರೆ.


ಈ ಸಂಬಂಧ ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರ್ಕಾರಕ್ಕೆ 2024ರ ಮಾರ್ಚ್ 19ರಂದು ನೋಟೀಸ್ ಕೂಡ ಜಾರಿಗೊಳಿಸಿದೆ. ಈ ಪ್ರಕರಣವನ್ನು ಹಿರಿಯ ವಕೀಲ ಡಿ ಎಲ್ ಚಿದಾನಂದ ಅವರಿಗೆ ವಹಿಸಿ 2024ರ ಏಪ್ರಿಲ್ 5ರಂದು ಆದೇಶ ಹೊರಡಿಸಿದೆ.


ಹೀಗಾಗಿ 2023ರ ಸೆ.22ರಂದು ಹೊರಡಿಸಿರುವ ಆದೇಶವನ್ನು ಪುನರಾವಲೋಕಿಸಬೇಕು ಮತ್ತು 2023ರ ಏಪ್ರಿಲ್ 20ರಂದು ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಎಸ್ಎಲ್ಪಿ ಪರ ವಹಿಸಿಕೊಳ್ಳುವುದು ನ್ಯಾಯಸಮ್ಮತವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಸಲ್ಲಿಸಿದ್ದಾರೆ.
ಆದರೆ ಅಭಿಯೋಜನಾ ಇಲಾಖೆಯು ಇದುವರೆಗೂ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬದಲಿಗೆ 2023ರ ಏಪ್ರಿಲ್ 24ರಂದು ಹೈಕೋರ್ಟ್ ಹೊರಡಿಸಿರುವ ಆದೇಶದ ಪ್ರಕರಣದಲ್ಲಿ ಸೂಕ್ತ ಆದೇಶಕ್ಕಾಗಿ ಇಲಾಖೆಯು ಕಡತ ಮಂಡಿಸಿರುವುದು ಗೊತ್ತಾಗಿದೆ.


ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

ರಾಮಕಥಾ ಗಾಯಕಿಯ ಪತಿಯ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸೆಪ್ಟೆಂಬರ್ 1 ರಂದು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಹೇಳಬೇಕು. ನೀವು ಸ್ವಾಮೀಜಿ ಪರ ನಿಲ್ಲಬೇಕು ಎಂದು ಸ್ವಾಮೀಜಿ ಕಡೆಯವರು ದೂರವಾಣಿ ಮೂಲಕ ಒತ್ತಡ ಹಾಕಿದ್ದರು ಮತ್ತು ಈ ಒತ್ತಡ ಹೇರುವ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತಿತರರು ಇದ್ದರು ಎಂದು ಆರೋಪಿಸಿದ್ದರು.

ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರ ಪತ್ನಿ ಸಂಧ್ಯಾಲಕ್ಷ್ಮಿ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಪುತ್ತೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ರಾಘವೇಶ್ವರ ಶ್ರೀಗಳು ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಪೀಠವು ರಾಘವೇಶ್ವರ ಭಾರತೀ ಶ್ರೀಗಳು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು ಕೋರ್ಟ್ ರದ್ದು ಮಾಡಿತ್ತು.

ವಿಚಾರಣೆ ವೇಳೆ ರಾಘವೇಶ್ವರ ಭಾರತೀ ಶ್ರೀಗಳ ಪರ ವಾದ ಮಂಡಿಸಿದ್ದ ವಕೀಲ ಪಿ.ಎನ್. ಮನಮೋಹನ್ ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಶಾಮ್ ಪ್ರಸಾದ್ ಶಾಸ್ತ್ರಿ ಹತಾಶ ಮನೋಭಾವದಿಂದ ಆತ್ಮಹತ್ಯೆಗೆ ಶರಣಾದಂತಿದೆ ಎಂದು ಪ್ರತಿಪಾದಿಸಿದ್ದರು.

ಅವರು ಬರೆದಿಟ್ಟಿದ್ದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರುಗಳ ಉಲ್ಲೇಖವೇ ಇಲ್ಲ. ಅಂತೆಯೇ, ತನಿಖಾಧಿಕಾರಿಗಳು ಶಾಮ್ ಪ್ರಸಾದ್ ಶಾಸ್ತ್ರಿ ಮೃತಪಟ್ಟ ಒಂದು ತಿಂಗಳ ಬಳಿಕ ಹೇಳಿಕೆ ತಯಾರಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸಿ ಆದೇಶಿಸಿರುವುದನ್ನು ಸ್ಮರಿಸಬಹುದು.



Join Whatsapp