ಮಣ್ಣು ಕುಸಿತ: ಬೆಂಗಳೂರು-ಮಂಗಳೂರು ರೈಲುಗಳ ಸಂಚಾರ ರದ್ದು
ಮಂಗಳೂರು: ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಯಡಕುಮೇರಿ ನಡುವಿನ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿತವಾಗಿ ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದಾಗಿದೆ.
ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಬಂದ್ ಆಗಿದೆ.
ಇನ್ನು ದ.ಕ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು ನಗರ ಹಾಗೂ ದ.ಕ ಜಿಲ್ಲೆಯ ವಿವಿಧೆಡೆ ಇಂದು ಮಧ್ಯಾಹ್ನದಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇನ್ನು ಕೆಲವು ಕಡೆ ಮನೆಗಳಿಗೆ ಹಾನಿಯಾಗಿದೆ.