ಬೆಂಗಳೂರು: ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಾಲ್ಕು ಮಹತ್ವದ ನಿರ್ಣಯಗಳು ಮಂಡನೆ ಆಗಿದ್ದು, ಎಲ್ಲವೂ ಅಂಗೀಕಾರ ಆಗಿವೆ.
ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿರುವಾಗಲೇ ನಾಲ್ಕು ನಿರ್ಣಯಗಳನ್ನ ಮಂಡಿಸಿ, ಸದನದ ಅಂಗೀಕಾರ ಪಡೆಯಲಾಯ್ತು. ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಎರಡು ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯಿತು.
1971ರ ಜನಗಣತಿ ಆಧರಿಸಿಯೇ ಲೋಕಸಭಾ, ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ನಿರ್ಣಯ, ಒಂದು ರಾಷ್ಟ್ರ ಒಂದು ಚುನಾವಣೆ ವಿರೋಧಿಸಿ, ಆ ವ್ಯವಸ್ಥೆ ಬೇಡ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯ್ತು. ಇನ್ನೂ ನೀಟ್ ವಿರೋಧಿಸಿ, ನೀಟ್ (NEET) ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ನಿರ್ಣಯ ಮಂಡಿಸಿ ಸದನದ ಅಂಗೀಕಾರ ಪಡೆಯಲಾಯಿತು.
ಅಲ್ಲದೇ ಪಾರಂಪರಿಕ ಅರಣ್ಯ ವಾಸಿಗಳ ನಿಯಮಗಳನ್ನ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಣಯ ಮಂಡಿಸಿ, ಸದನದ ಅಂಗೀಕಾರ ಪಡೆಯಲಾಯಿತು.