ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬಡ ವಿದ್ಯಾರ್ಥಿಗಳ ಹಾಗೂ ಬಡ ರೋಗಿಗಳ ಅನುಕೂಲಕ್ಕಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕೆಂಬ ಕೂಗು ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದೀಗ ಈ ಕೂಗು ಹೆಚ್ಚಾಗಿದ್ದು, ಪುತ್ತೂರಿನ ಸಮಾನ ಮನಸ್ಕ ಯುವಕರ ತಂಡವೊಂದು ಸಾಮಾಜಿಕ ಜಾಲತಾಣದ ಮೂಲಕ ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
ಪ್ರತೀ ಬಾರಿ ನಗರಗಳಲ್ಲಿ ಹುಟ್ಟಿಕೊಳ್ಳುತ್ತಿದ್ದ ಹೋರಾಟ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿಯೂ ತೀವ್ರತೆ ಪಡೆದಿರುವುದು ಹೊಸ ಆಶಾಕಿರಣ ಮೂಡಿಸುವಂತೆ ಮಾಡಿದೆ.
ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂಬ ನಿಟ್ಟಿನಲ್ಲಿ ಕಡಬ, ಸುಳ್ಯ, ವಿಟ್ಲ, ಬೆಳ್ತಂಗಡಿ ಭಾಗದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು 2023ರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ನಡೆಸಿತ್ತು. ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷಗಳು ಸರ್ಕಾರಿ ಕಾಲೇಜು ಸ್ಥಾಪನೆ ಬಗ್ಗೆ ಹೇಳಿಕೊಂಡರೂ, ಯೋಜನೆ ಗಗನ ಕುಸುಮವಾಗಿಯೇ ಉಳಿದುಕೊಂಡಿದೆ. ಬಡವರ ಮಕ್ಕಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪುತ್ತೂರು ಪೇಟೆಯ ಹೊರ ವಲಯದ ಸೇಡಿಯಾಪು ಭಾಗದಲ್ಲಿ ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದ ಸಂದರ್ಭ ಸುಮಾರು 40 ಎಕರೆ ಸರ್ಕಾರಿ ಜಾಗವನ್ನು ಮೀಸಲಿರಿಸುವ ಕಾರ್ಯ ಮಾಡಿದ್ದರು. ಆದರೆ ಹೋರಾಟಗಳು, ಹೇಳಿಕೆಗಳಿಗೆ ಸೀಮಿತವಾಯಿತೇ ಹೊರತು ಜನರಿಗೆ ಬೇಕಾದ ವ್ಯವಸ್ಥೆ ಲಭಿಸಿಲ್ಲ. ಈ ನಡುವೆ ಸರ್ಕಾರ ಒಂದು ಜಿಲ್ಲೆಗೆ ಎರಡೆರಡು ಸರ್ಕಾರಿ ವೈದ್ಯಕೀಯ ಕಾಲೇಜು ನೀಡಿರುವುದು ಜನರನ್ನು ಮತ್ತೆ ಬಡಿದೆಬ್ಬಿಸಿದೆ.
ಸುಳ್ಯ ಭಾಗದಿಂದ ಹೋರಾಟದ ಕಾವು ಹೆಚ್ಚಾಗುತ್ತಿದ್ದು, ಅಂಗಡಿ, ರಿಕ್ಷಾ ನಿಲ್ದಾಣ ಸೇರಿ ಜನರಲ್ಲಿ ಸರ್ಕಾರಿ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭವಾಗಿದೆ. ಜನರು ಈ ಹೋರಾಟದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದು, ಮತ್ತೊಮ್ಮೆ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕೆಂಬ ಕೂಗು ಕೇಳಿಸಲಾರಂಭಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಇದರತ್ತ ಗಮನ ಹರಿಸಿ ಜನರ ಬೇಡಿಕೆಗೆ ಸ್ಪಂದಿಸುತ್ತಾರಾ ಎಂಬ ಕುತೂಹಲ ಮೂಡಿಸಿದೆ.
ವಾಟ್ಸಾಪ್ ಗ್ರೂಪ್‌ಗಳಲ್ಲಿ ಅಭಿಯಾನ
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕೆಲಸಗಳು ಹಿಂದಿನ ಶಾಸಕರಿಂದ ನಡೆದರೂ, ಅದಕ್ಕೆ ಸರಿಯಾದ ಮನ್ನಣೆ ಇನ್ನೂ ಲಭಿಸಿಲ್ಲ. ಶಾಸಕ ಅಶೋಕ್ ಕುಮಾರ್ ರೈ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಿ ಸರ್ಕಾರದ ಮಟ್ಟಕ್ಕೆ ಕಡತ ತಲುಪುವಂತೆ ಮಾಡಿದ್ದರು. ಆದರೆ ಆ ಬಳಿಕ ಆಸ್ಪತ್ರೆ ವಿಚಾರದಲ್ಲಿ ಯಾವುದೇ ಬೆಳವಣಿಗೆಗಳು ನಡೆಯದೆ, ಸರಕಾರಿ ಆಸ್ಪತ್ರೆಗಳಿಗೆ ಮೇಲ್ದರ್ಜೆಗೇರುವ ಭಾಗ್ಯ ಲಭಿಸಿಲ್ಲ. ಉನ್ನರ ಶಿಕ್ಷಣಕ್ಕೆ ಸರಕಾರಿ ಕಾಲೇಜುಗಳೂ ಆಗಿಲ್ಲ.
ಸರ್ಕಾರಿ ವೈದ್ಯಕೀಯ ಕಾಲೇಜು ಜಿಲ್ಲೆಗೆ ಬೇಕೆಂಬ ಕೂಗು ಎರಡು ದಿನಗಳಿಂದ ಜೋರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಈಗಾಗಲೇ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಜನಾಂದೋಲನ ವಾಟ್ಸಾಪ್ ಗ್ರೂಪ್ಗಳು ರಚನೆಯಾಗಿದ್ದು, ಜನರು ಗ್ರೂಪ್‌ಗಳಿಗೆ ಸೇರಿಕೊಳ್ಳುತ್ತಿರುವುದು ಹೋರಾಟಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದಂತಾಗಿದೆ. ಬಿತ್ತಿಪತ್ರಗಳ ಪ್ರದರ್ಶನ ಮಾಡುತ್ತಿದ್ದು, ಇದರ ಚಿತ್ರಗಳನ್ನು ಟ್ವಿಟ್ಟರ್, ಫೇಸ್‌ಬುಕ್ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.