ಜೂನ್ 25ರಂದು ‘ಸಂವಿಧಾನ ಹತ್ಯಾ ದಿವಸ್’ ಆಚರಣೆ: ಅಮಿತ್ ಶಾ

Prasthutha|

ನವದೆಹಲಿ: ಜೂನ್ 25 ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

- Advertisement -

ಮಾಜಿ ಪ್ರಧಾನಿ ಇಂದಿರಾಗಾಂಧಿ ಘೋಷಿಸಿದ್ದ ತುರ್ತು ಪರಿಸ್ಥಿತಿಯ ಕಹಿನೆನಪಿಗೆ ಜೂನ್ 25ರಂದು ಸಂವಿಧಾನ ಹತ್ಯಾ ದಿವಸ ಆಚರಿಸಲು ಸರಕಾರ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿವರ್ಷ ಜೂನ್ 25ರಂದು ತುರ್ತು ಪರಿಸ್ಥಿತಿಯಿಂದಾಗಿ ಅಮಾನವೀಯ ನೋವುಗಳನ್ನು ಸಹಿಸಿಕೊಂಡವರ ಅಪಾರ ಕೊಡುಗೆಯನ್ನು ಸ್ಮರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

- Advertisement -

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸರ್ವಾಧಿಕಾರಿ ಮನಸ್ಥಿತಿಯ ನಿರ್ಲಜ್ಜ ಪ್ರದರ್ಶನದಿಂದಾಗಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಆತ್ಮವನ್ನು ಕತ್ತು ಹಿಸುಕಿದ್ದರು. ಆಗ ಲಕ್ಷಾಂತರ ಜನರನ್ನು ತಮ್ಮದಲ್ಲದ ತಪ್ಪಿಗೆ ಜೈಲಿಗೆ ಹಾಕಲಾಗಿತ್ತು. ಜತೆಗೆ, ಮಾಧ್ಯಮಗಳ ಧ್ವನಿಯನ್ನು ಅಡಗಿಸಲಾಗಿತ್ತು ಎಂದು ಶಾ ತಿಳಿಸಿದ್ದಾರೆ.

1975ರ ಜೂನ್ 25ರಂದು ಆಂತರಿಕ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು. ಈಚೆಗೆ ಆಂತರಿಕ ತುರ್ತು ಪರಿಸ್ಥಿತಿ ಹೇರಿದ 49ನೇ ವಾರ್ಷಿಕೋತ್ಸವದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು, ಆಂತರಿಕ ತುರ್ತುಪರಿಸ್ಥಿತಿಯನ್ನು ಖಂಡಿಸಿದ ಮತ್ತು ಪ್ರತಿಭಟಿಸಿದ ಎಲ್ಲಾ ಭಾರತದ ನಾಗರಿಕರಿಗೆ ವಂದನಾರ್ಪಣೆಯನ್ನು ಸಲ್ಲಿಸಿದ್ದರು.



Join Whatsapp