ಮಂಗಳೂರು : ರಾಹುಲ್ ಗಾಂಧಿಯವರ ಕೆನ್ನೆಗೆ ಹೊಡೆಯಲು ಹೋಗುವುದಿದ್ದರೆ ಎಜೆ ಆಸ್ಪತ್ರೆಯಲ್ಲಿ ಒಂದು ಬೆಡ್ ಬುಕ್ ಮಾಡಿಕೊಂಡು ಹೋಗಿ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರಿಗೆ ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ ಹೆಗಡೆ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭರತ್ ಶೆಟ್ಟಿ ಯಾವತ್ತೂ ಶಸ್ತ್ರಾಸ್ತ್ತ ಹಿಡಿಯಲ್ಲ ಅಂತ ನಮಗೆ ಗೊತ್ತಿದೆ, ಆದರೆ ಬಡವರ ಕೈಗೆ ಶಸ್ತ್ರಾಸ್ತ್ತ ಕೊಡ್ತಾರೆ, ಅಶಾಂತಿ ಸೃಷ್ಟಿಸಲು ಗಲಾಟೆ ಮಾಡಿಸಲು ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ಭರತ್ ಶೆಟ್ಟಿ ಮತ್ತು ವೇದವ್ಯಾಸ್ ಕಾಮತ್ ಗೆ ಸೀಟ್ ಇಲ್ಲ, ಹಾಗಾಗಿ ಅನಂತ ಕುಮಾರ್ ಹೆಗಡೆ ರೀತಿ ಇವರು ಮಾತನಾಡುತ್ತಿದ್ದಾರೆ, ಮುಂದೆ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಮಂಗಳೂರಿಗೆ ಬೆಂಕಿ ಹಚ್ಚಲು ಹೋಗಬೇಡಿ ಎಂದು ಎಂ.ಜಿ ಹೆಗಡೆ ಮನವಿ ಮಾಡಿದರು.
ಭರತ್ ಶೆಟ್ರೆ, ಬಿಜೆಪಿ ಮತ್ತು ಸಂಘಪರಿವಾರದ ಇತಿಹಾಸವನ್ನು ಒಮ್ಮೆ ಓದಿ, ಉದ್ರೇಕಕಾರಿ ಭಾಷಣ ಮಾಡಿದರೆ ನೀವು ಹೀರೋ ಆಗುವುದಿಲ್ಲ, ಸಾವರ್ಕರ್ ಅವರನ್ನು ಆರ್ ಎಸ್ ಎಸ್ ದೂರ ಇಟ್ಟಿತ್ತು, ತೊಗಾಡಿಯಾ ಎಲ್ಲಿ ಹೋದರು? ಪ್ರಚೋದನಕಾರಿ ಭಾಷಣ ಮಾಡುತ್ತಿದ್ದ ವಿನಯ್ ಕಟಿಯಾರ್, ಸಾಧ್ವಿ, ಉಮಾ ಭಾರತಿ, ಅನಂತ್ ಕುಮಾರ್ ಹೆಗಡೆಗೆ ಆದ ಗತಿಯೇ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ಹರೀಶ್ ಪೂಂಜರಿಗೂ ಆಗಲಿದೆ ಎಂದು ಅವರು ಭವಿಷ್ಯ ನುಡಿದರು.
ಬಿಜೆಪಿಯವರ ಹಿಂದುತ್ವ ಅಂದರೆ ಏನು? ಬಿಜೆಪಿಯ ಹಿಂದುತ್ವದ ಗ್ರಂಥ ಮತ್ತು ಪಂಥ ಯಾವುದು? ಎಂದು ಪ್ರಶ್ನಿಸಿದ ಅವರು ಭಾರತೀಯ ಜನತಾ ಪಕ್ಷವನ್ನು ಭಾರತೀಯ ಜನತಾ ಪಂಥ ಎಂದು ಮರುನಾಮಕರಣ ಮಾಡಿ, ದೇಶಕ್ಕೆ ನರೇದ್ರನಾಂದ, ರಾಜ್ಯಕ್ಕೆ ಅಶೋಕಾನಂದ, ಸುರತ್ಕಲ್ ಗೆ ಭರತಾನಂದ, ಮಂಗಳೂರಿಗೆ ವೇದವ್ಯಾಸನಾಂದ, ಬೆಳ್ತಂಗಡಿಗೆ ಹರೀಶಾನಂದ ಎಂಬ ಪೀಠಗಳನ್ನು ಮಾಡಿ ಎಂದು ಅವರು ವ್ಯಂಗ್ಯವಾಡಿದರು.
ಬಿಜೆಪಿಯವರು ಅಯೋಧ್ಯೆಯಲ್ಲಿ ಸೋತ ಬಳಿಕ ರಾಮನನ್ನೂ ಟ್ರೋಲ್ ಮಾಡಿದ್ದಾರೆ, ಇಲ್ಲಿ ಮುಸ್ಲಿಮರ ಜೊತೆ ವ್ಯಾಪಾರ ಮಾಡಬೇಡಿ ಎಂದು ಕರೆಕೊಡುವ ಬಿಜೆಪಿಯವರು, ಅಯೋಧ್ಯೆಯಲ್ಲಿ ಬಿಜೆಪಿಗೆ ಮತಕೊಡದ ಹಿಂದೂ ವ್ಯಾಪಾರಿಗಳ ಜೊತೆ ವ್ಯವಹಾರ ಮಾಡಬೇಡಿ ಎಂದು ಕರೆಕೊಡುತ್ತಿದ್ದಾರೆ ಎಂದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ ಹಿಂಸೆಗೆ ಪ್ರಚೋದನೆ ಕೊಡುವುದಿಲ್ಲ, ಹೀಗಾಗಿ ನಾವು ಅವರ ದಾರಿಯಲ್ಲೇ ಹೋಗುತ್ತೇವೆ ಎಂದು ಎಂ.ಜಿ ಹೆಗಡೆ ಹೇಳಿದರು.