ಶಿವಮೊಗ್ಗ: ಅಳಿಯನ ಆತ್ಮಹತ್ಯೆ ಕುರಿತು ಮಾಜಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಪ್ರತಾಪ್ ಕಾಣೆಯಾದ ವಿಚಾರ ತಿಳಿದು ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದೆ. ನಂತರ ಹೊನ್ನಾಳಿಯಲ್ಲಿ ಜೋಳಕ್ಕೆ ಬಳಸುವ ವಿಷ ಕುಡಿದಿರುವ ವಿಷಯ ತಿಳಿಯಿತು ಎಂದು ವಿಷಾದವಾಗಿ ಹೇಳಿದ್ದಾರೆ.
ಮಧ್ಯಾಹ್ನ 1.45ಕ್ಕೆ ಸಹೋದರ ಫೋನ್ ಮಾಡಿ ವಿಷಯ ತಿಳಿಸಿದ್ದರು. ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ದೆವು. ಶಿವಮೊಗ್ಗ ಹತ್ತಿರವಾಗುತ್ತದೆ ಎಂದು ಇಲ್ಲಿಗೆ ಶಿಫ್ಟ್ ಮಾಡಿದ್ದಾರೆ ಎಂದರು.
ಮದುವೆಯಾಗಿ 16 ವರ್ಷ ಆಗಿತ್ತು. ಮಕ್ಕಳಾಗದಿರುವ ವಿಚಾರದಲ್ಲಿ ಅಳಿಯ ಕೊರಗಿದ್ದರು. ಡಿಅಡಿಕ್ಷನ್ ಸೆಂಟರ್ನಲ್ಲಿ ಎರಡು ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಕೆರೆಗಳಿಗೆ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯಿತು. ಮಂಗಳವಾರ ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದರು.
ಬಿ.ಸಿ. ಪಾಟೀಲ್ ಅವರ ಮೊದಲ ಪುತ್ರಿ ಸೌಮ್ಯ ಅವರ ಪತಿ ಕೆ.ಜಿ. ಪ್ರತಾಪ್ ಕುಮಾರ್ (42) ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ದಾರಿ ಹೋಕರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.