ಡೆಂಗ್ಯೂ ತುರ್ತು ಘೋಷಿಸಿ ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ನೀಡಬೇಕು: ಆರ್ ಅಶೋಕ್

Prasthutha|

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣಿಸುತ್ತಿದ್ದು, ಸರ್ಕಾರ ಕೂಡಲೇ ಡೆಂಗ್ಯೂ ತುರ್ತು ಘೋಷಿಸಿ ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸರಕಾರವನ್ನು ಆಗ್ರಹಿಸಿದ್ದಾರೆ.

- Advertisement -

ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಡೆಂಗ್ಯೂ ಸೋಂಕಿತರ ಆರೋಗ್ಯ ವಿಚಾರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಹಲವು ದಿನಗಳಿಂದ ಡೆಂಗ್ಯೂ ಮಹಾಮಾರಿಯಾಗಿ ಪರಿ ಣಮಿಸಿದೆ. ರಾಜ್ಯದಲ್ಲಿ ಪ್ರತಿ ದಿನ ಮೂರರಿಂದ 4 ಜನ ಸಾವನ್ನಪ್ಪುತ್ತಿದ್ದಾರೆ ಎಂದರು.

ಇಂದೂ ಇಬ್ಬರು ಮಕ್ಕಳು ಡೆಂಗ್ಯೂನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದು ಅತ್ಯಂತ ಬೇಸರದ ಸಂಗತಿ. ಈ ಹಿಂದೆ ಕೋವಿಡ್-19 ಕಾಣಿಸಿಕೊಂಡಾಗ ನಮ ಸರ್ಕಾರ ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡಿತ್ತು. ಡೆಂಗ್ಯೂ ಪರೀಕ್ಷೆ ಮಾಡುವಂತೆ ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕು. ಇದಕ್ಕೂ ಕೂಡ ಸರ್ಕಾರ ದರ ನಿಗದಿಪಡಿಸಬಾರದೆಂದು ಮನವಿ ಮಾಡಿದರು. ಹಿಂದೆ ನಾನು ಆರೋಗ್ಯ ಸಚಿವನಾಗಿ ಕೆಲಸ ಮಾಡಿದ ಅನುಭವದಲ್ಲಿ ಸರ್ಕಾರಕ್ಕೆ ನನ್ನದೇ ಆದ ಸಲಹೆಗಳನ್ನು ಕೊಡುತ್ತಿದ್ದೇನೆ. ವಿರೋಧ ಪಕ್ಷದ ನಾಯಕನಾಗಿ ನಾನು ಮಾಡಬೇಕಾದ ಕರ್ತವ್ಯವೂ ಹೌದು. ಈಗಾಗಲೇ ಝೀಕಾ ವೈರಸ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ. ಕಾಲರದಿಂದಲೂ ಜನರು ಸಾಯುತ್ತಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕೆಂದು ಅಶೋಕ್ ಒತ್ತಾಯಿಸಿದರು.

- Advertisement -

ಮೊದಲು ಉಚಿತವಾಗಿ ಕೊಟ್ಟು ನಂತರ ಜನರಿಂದ ಹಣ ವಸೂಲಿ ಮಾಡುವ ಕೆಲಸ ಮಾಡಬೇಡಿ. ಹೆಚ್ಚೆಂದರೆ 10 ಕೋಟಿ ಖರ್ಚಾಗಬಹುದು. ಮೂರವರೆ ಲಕ್ಷ ಕೋಟಿ ಬಜೆಟ್ ಮಂಡಿಸುವ ಸರ್ಕಾರಕ್ಕೆ ಇದು ಯಾವ ಲೆಕ್ಕವೂ ಅಲ್ಲ. ಜನರ ರಕ್ಷಣೆಗೆ ನಾವಿದ್ದೇನೆ ಎಂದು ಸರ್ಕಾರ ಅಭಯ ನೀಡಬೇಕೆಂದು ಮನವಿ ಮಾಡಿದರು.

ಕೋವಿಡ್ ಮಾದರಿಯಲ್ಲಿ ಡೆಂಗ್ಯೂಗೆ ಪ್ರತ್ಯೇಕವಾದ ವಾರ್ಡ್‌ಗಳನ್ನು ಮಾಡಬೇಕು. ನನಗಿರುವ ಮಾಹಿತಿ ಪ್ರಕಾರ ರಾಜ್ಯದ ಅನೇಕ ಕಡೆ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ ಇದೆ. ತಕ್ಷಣವೇ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆಯನ್ನು ಪರಿಹರಿಸಬೇಕು. ಜನರು ಪರೀಕ್ಷೆ ಮಾಡಿಕೊಳ್ಳದೇ ಇರುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲು ಅಧಿಕಾರಿಗಳು ಎಸಿ ಕೊಠಡಿಯಿಂದ ಹೊರಬಂದು ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ಡೆಂಗ್ಯೂ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಗೈಡ್​ಲೈನ್ಸ್ ಹೊರಡಿಸಿದ್ದಾರೆ.



Join Whatsapp