ಬೆಂಗಳೂರು: ಕೇಂದ್ರ ಮಂತ್ರಿ ಆದ ಮೇಲೂ ಕುಮಾರಸ್ವಾಮಿ ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮುಡಾ ಹಗರಣ ಹೊರಬರಲು ಡಿಕೆ ಶಿವಕುಮಾರ್ ಕಾರಣ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರು ಅನ್ಯೋನ್ಯವಾಗಿದ್ದಾರೆ. ಪಕ್ಷದಲ್ಲಿ ಏನೇ ಇದ್ದರೂ ಸುರ್ಜೆವಾಲ ಬಗೆಹರಿಸುತ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ, ಅದರ ಅವಶ್ಯಕತೆ ಇಲ್ಲ. ಪಾಪ ಕುಮಾರಸ್ವಾಮಿ ಏನೇನೋ ಹೇಳಿದ್ದಾರೆ. ಸಿಎಂ ವಿರುದ್ಧ ಡಿಕೆ ಸಂಚು ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಕೇಂದ್ರ ಮಂತ್ರಿ ಆದ್ಮೇಲೂ ಈ ರೀತಿಯ ಕೀಳು ರಾಜಕಾರಣ ಬೇಕಾ ಅವರಿಗೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಪತ್ನಿಗೆ ಜಮೀನು ಕೂಡ ಕೊಟ್ಟಿದ್ದೇ ಬಿಜೆಪಿ ಸರ್ಕಾರ ಇದ್ದಾಗಲೇ ಹೊರತು, ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ ಅಲ್ಲ. ಮುಖ್ಯಮಂತ್ರಿ ಹೆಸರು ಹೇಳಿದ್ರೆ ಬಿಜೆಪಿ ಸರ್ಕಾರದಲ್ಲಿ ಮಾಡಿರುವ ಹಗರಣ ಮುಚ್ಚಿ ಹೋಗುತ್ತವೆ ಅನ್ನೋ ಕಾರಣಕ್ಕೆ ಸಿಎಂ ಹೆಸರು ಹೇಳಿದ್ದಾರೆ ಅನ್ನಿಸುತ್ತೆ. ಮುಖ್ಯಮಂತ್ರಿ ಕುಟುಂಬದಿಂದ ಯಾವುದೇ ತಪ್ಪು ಆಗಿಲ್ಲ. ಕುಮಾರಸ್ವಾಮಿ ತಮ್ಮ ಕೆಲಸ ಮಾಡಲಿ, ಒಂದೊಳ್ಳೆ ಅವಕಾಶ ಸಿಕ್ಕಿದೆ. ಇದೆಲ್ಲಾಬಿಟ್ಟು ಸಿಎಂ,ಡಿಕೆ ಮತ್ತು ಚಲುವರಾಯಸ್ವಾಮಿ ಹಿಂದೆ ಬರೋದು ಬೇಡ ಎಂದರು.
ಕುಮಾರಸ್ವಾಮಿಯ ಜನತಾ ದರ್ಶನದ ಬಗ್ಗೆ ಪ್ರತಿಕ್ರಿಯಿಸಿ, ನಾನು ಅವರಿಗೆ ಗೈಡ್ ಮಾಡುವಷ್ಟು ದೊಡ್ಡವನಲ್ಲ, ಈ ರೀತಿ ರಾಜಕಾರಣ ಮಾಡುವುದು ಬೇಕಿರಲಿಲ್ಲ. ಅವ್ರ ಜೊತೆ ಕೂಡ ಕೆಲಸ ಮಾಡಿದ್ದೀನಿ. ಅವರು ನನಗೆ ಟಾಂಗ್ ಕೋಡೋಕೆ ಏನ್ ಬೇಕಾದ್ರೂ ಮಾಡಲಿ. ಆದರೆ ಅವರು ಕೇವಲ ಮಂಡ್ಯಗೆ ಮಾತ್ರ ಸೀಮಿತವಲ್ಲ ಎಂಬುದನ್ನ ಅರಿತುಕೊಳ್ಳಬೇಕು. ಇಡೀ ದೇಶಕ್ಕೆ ಅವರು ಮಂತ್ರಿಯಾಗಿದ್ದಾರೆ. ಕಾವೇರಿ ವಿಚಾರದಲ್ಲಿ ಕರೆದರೆ, ನಮ್ಮಿಂದ ಮಾಹಿತಿ ಬೇಕು ಅಂದ್ರೆ ನಾವು ಕೊಡಲು ಸಿದ್ಧರಿದ್ದೇವೆ. ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿ. ರಾಷ್ಟ್ರದಲ್ಲಿ ಕೈತುಂಬಾ ಕೆಲಸ ಇದ್ದಾವೆ. ಇಂತಹ ರಾಜಕಾರಣ ಮಾಡೋದು ಬಿಟ್ಟು ಮೊದಲು ಅವುಗಳನ್ನ ಮಾಡಲಿ, ಇಲ್ಲಿ ಶಾಸಕರು, ಸಿಎಂ ಹಾಗೂ ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.