ಉಳಾಯಿಬೆಟ್ಟು ಕಾಂಗ್ರೆಸ್ ಮುಖಂಡ ಮನೆ ದರೋಡೆ ಪ್ರಕರಣ: 10 ಮಂದಿ ಬಂಧನ

Prasthutha|

ಮಂಗಳೂರು: ಉಳಾಯಿಬೆಟ್ಟು ಸಮೀಪದ ಪೆರ್ಮಂಕಿಯ ಉದ್ಯಮಿ, ಕಾಂಗ್ರೆಸ್‌ ಮುಖಂಡ ಪದ್ಮನಾಭ ಕೋಟ್ಯಾನ್‌ ಮನೆಯಲ್ಲಿ ಜೂ.21ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.

- Advertisement -

ನೀರುಮಾರ್ಗ ನಿವಾಸಿಗಳಾದ ವಸಂತ ಕುಮಾರ್ (42), ರಮೇಶ ಪೂಜಾರಿ (42), ಬಂಟ್ವಾಳ ಪೆರುವಾಯಿಯ ರೇಮಂಡ್ ಡಿಸೋಜ (47), ಉಪ್ಪಳ ಪೈವಳಿಕೆಯ ಬಾಲಕೃಷ್ಣ ಶೆಟ್ಟಿ (48), ಕೇರಳದ ತೃಶೂರು ಜಿಲ್ಲೆಯ ಶಾಕೀರ್ ಹುಸೈನ್ ಯಾನೆ ಜಾಕೀರ್ (56), ವಿನೋಜ್ (38), ಸಜೀಶ್ (32), ಸತೀಶ್ ಬಾಬು (44), ಶಿಜೋ ದೇವಸ್ಸಿ (38), ತಿರುವನಂತಪುರ ಜಿಲ್ಲೆಯ ಬಿಜು (41) ಬಂಧಿತರು.

ನಗರ ಪೊಲೀಸ್‌ ಆಯುಕ್ತಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಈ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಇದ್ದು, ಅವರನ್ನು ಕೂಡ ಶೀಘ್ರ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ‌.

- Advertisement -

ಜಿಲ್ಲಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಈ ಪ್ರಕರಣ ಪೊಲೀಸರಿಗೆ ಸವಾಲು ಕೂಡ ಆಗಿತ್ತು. ಆರೋಪಿಗಳ ಪತ್ತೆಗಾಗಿ ಕಂಕನಾಡಿ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಮತ್ತು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ನೇತೃತ್ವದ ಹಾಗೂ ಸಿಸಿಬಿ ತಂಡಗಳನ್ನು ಪ್ರತ್ಯೇಕವಾಗಿ ರಚಿಸಲಾಗಿತ್ತು. 40 ಮಂದಿಯ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ವಿವಿಧ ಆಯಾಮಗಳು ಮತ್ತು ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿತ್ತು. ದರೋಡೆ ನಡೆಸಿದ ಬಳಿಕ ಆರೋಪಿಗಳು ಕಾರಿನಲ್ಲಿ ಬಂಟ್ವಾಳ ಕಡೆಗೆ ತೆರಳಿದ್ದರು. ಬಳಿಕ ತಲಪಾಡಿ ಮೂಲಕ ಕೇರಳಕ್ಕೆ ಎರಡು ಕಾರಿನಲ್ಲಿ ಪರಾರಿಯಾಗಿದ್ದರು. ಇದೀಗ 10 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ತನಿಖೆಯ ವೇಳೆ ಪದ್ಮನಾಭ ಕೋಟ್ಯಾನ್‌ರ ಲಾರಿಯಲ್ಲಿ ಚಾಲಕನಾಗಿದ್ದ ಮತ್ತು ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯನೇ ಈ ಕೃತ್ಯದ ಸೂತ್ರಧಾರಿ ಎಂಬುದು ತಿಳಿದುಬಂದಿದೆ. ಪದ್ಮನಾಭ ಕೋಟ್ಯಾನ್‌ರ ಮನೆಯಲ್ಲಿ ಕೋಟಿಗಟ್ಟಲೆ ಹಣ ಇದೆಯೆಂದು ವಸಂತ ಕುಮಾರ ಊರವನೇ ಆದ ರಮೇಶ್ ಬಳಿ ಹೇಳಿದ್ದ. ಈತನು ಬಂಟ್ವಾಳದ ರೇಮಂಡ್ ಡಿಸೋಜನಿಗೆ ಮಾಹಿತಿ ನೀಡಿದ್ದ. ಅದರಂತೆ ಆ ಹಣವನ್ನು ಲೂಟಿ ಮಾಡಲು ರೇಮಂಡ್ ಡಿಸೋಜ ಸ್ಕೆಚ್ ರೂಪಿಸಿದ. ಅದಕ್ಕಾಗಿ ಮಂಜೇಶ್ವರ ಸಮೀಪದ ಉಪ್ಪಳದ ಪೈವಳಿಕೆಯ ಬಾಲಕೃಷ್ಣ ಶೆಟ್ಟಿ ಮತ್ತು ಕೇರಳ ಮೂಲದ ದರೋಡೆ ಕೋರರನ್ನು ಸಂಪರ್ಕ ಮಾಡಿದ್ದ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಲಾರಿ ಚಾಲಕನಾಗಿ ವಿಶ್ವಾಸಕ್ಕೆ ಪಾತ್ರನಾಗಿ ಪದ್ಮನಾಭ ಕೋಟ್ಯಾನ್‌ರ ಮನೆಯೊಳಗೆ ಹೋಗಿ ಬರುವಷ್ಟರ ಮಟ್ಟಿಗೆ ಆತ್ಮೀಯತೆ ಬೆಳೆಸಿದ್ದ.

ದರೋಡೆಕೋರರು ಸುಮಾರು 15ರಷ್ಟು ಚೀಲಗಳನ್ನು ಹಿಡಿದುಕೊಂಡು ಬಂದಿದ್ದರು. ಜಾಕೀರ್ ಹುಸೈನ್ ತನಿಖೆಯ ದಿಕ್ಕು ತಪ್ಪಿಸಲು ಹಿಂದಿ ಭಾಷೆ ಮಾತನಾಡುತ್ತಾ ಪದ್ಮನಾಭ ಕೋಟ್ಯಾನ್‌ರ ಮೇಲೆ ಹಲ್ಲೆ ಮಾಡಿದ್ದ. ಇತರ ದರೋಡೆಕೋರರು ಪದ್ಮನಾಭ ಕೋಟ್ಯಾನ್‌ರ ಪತ್ನಿ-ಮಗನನ್ನು ಬೆದರಿಸಿ ಹಣ ಎಲ್ಲಿದೆ ಎಂದು ಹುಡುಕಾಟ ನಡೆಸಿದ್ದರು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

2 ಕಾರು ವಶ: ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಕೂಡ ವಶಪಡಿಸಲಾಗಿದೆ. 10 ಮಂದಿಯ ಪೈಕಿ ನಾಲ್ಕು ಮಂದಿ ಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರು ಮಂದಿಯನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

100ರಿಂದ 300 ಕೋ.ರೂ.ಗೆ?: ಪದ್ಮನಾಭ ಕೋಟ್ಯಾನ್ ಬಳಿ 100 ಕೋ.ರೂ. ಇದೆ ಎಂದು ಸೂತ್ರಧಾರ ವಸಂತ ಕುಮಾರ್ ಶಂಕಿಸಿದ್ದರೆ, ಕೇರಳದ ದರೋಡೆಕೋರರ ಜೊತೆ ಮಾತುಕತೆ ನಡೆಸಿದ್ದ ರೇಮಂಡ್ ಡಿಸೋಜನು ಪದ್ಮನಾಭ ಕೋಟ್ಯಾನ್ ಬಳಿ 300 ಕೋ.ರೂ. ಇದೆ ಎಂಬ ಮಾಹಿತಿಯನ್ನು ನೀಡಿದ್ದ. ಪದ್ಮನಾಭ ಕೋಟ್ಯಾನ್ ಮಲಗುತ್ತಿದ್ದ ಬೆಡ್‌ನ ಅಡಿಭಾಗದಲ್ಲಿ ನಗದು ಇದೆಯೆಂದು ಶಂಕಿಸಿ ದರೋಡೆಕೋರರು ಆರೇಳು ತಿಂಗಳಿನಿಂದ ಸ್ಕೆಚ್ ಹಾಕಿದ್ದರು. ಅದರಂತೆ ಜೂ.15ರಂದು ದರೋಡೆಗೆ ಯತ್ನಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅದನ್ನು ಕೈಬಿಟ್ಟು ಜೂ.21ರಂದು ರಾತ್ರಿ ಮನೆಗೆ ನುಗ್ಗಿದ್ದರು.

ಆರೋಪಿಗಳಲ್ಲಿ ಜಾನ್ ಬಾಸ್ಕೋ ಎಂಬಾತ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದು, ಈತನ ಮೇಲೆ ತ್ರಿಶೂರಿನಲ್ಲಿ ಹಲವು ಪ್ರಕರಣ ದಾಖಲಾಗಿವೆ. ಸತೀಶ್ ಬಾಬು ಎಂಬಾತನ ಮೇಲೆ ಕೊಲೆ, ಕೊಲೆಯತ್ನ ಪ್ರಕರಣ ವಿದೆ. ವಸಂತ್ ಕುಮಾರ್ ಮೇಲೆ ಮಂಗಳೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.



Join Whatsapp