ಮಂಗಳೂರು: ಕರಾವಳಿ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೆಟ್ಟಗಳು, ಜಲಪಾತಗಳ ಬಳಿ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಜಮಲಾಬಾದ್ (ಗಡಾಯಿಕಲ್ಲು) ಬೆಟ್ಟ, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಫಾಲ್ಸ್ ಸೇರಿದಂತೆ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಬೆಳ್ತಂಗಡಿ ಆರ್ಎಫ್ಒಗೆ ಕುದುರೆಮುಖ ಸಿಎಫ್ ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿ, ಬಂಟ್ವಾಳದಲ್ಲಿ ಶಾಲೆಗಳಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸೂಚನೆ ಮೇರೆಗೆ ರಜೆ ಘೋಷಿಸಲಾಗಿದೆ. ಬಂಟ್ವಾಳದಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.