ಕಲಬುರಗಿ: ಅತ್ಯಾಚಾರಿ ಮಗನಿಗೆ 20 ವರ್ಷ, ಸಹಕರಿಸಿದ್ದ ತಂದೆಗೆ 10 ವರ್ಷ ಜೈಲು ಶಿಕ್ಷೆ

Prasthutha|

ಕಲಬುರಗಿ: ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಹೀನವಾಗಿ ಅತ್ಯಾಚಾರವೆಸಗಿದ್ದ ಅಪರಾಧಿಗೆ 20 ವರ್ಷ ಹಾಗೂ ಮಗನ ಈ ಕೃತ್ಯಕ್ಕೆ ಸಹಕರಿಸಿದ್ದ ತಂದೆಗೆ ಕಲಬುರಗಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

- Advertisement -

ಯಲ್ಲಪ್ಪ ಅಲಿಯಾಸ್‌ ಯಲ್ಲಾಲಿಂಗ ಯಡ್ರಾಮಿ ಅತ್ಯಾಚಾರ ಎಸಗಿದ ಅಪರಾಧಿ. ದೇವಪ್ಪ ಅಲಿಯಾಸ್‌ ದೇವಿಂದ್ರಪ್ಪ ಯಡ್ರಾಮಿ ಮಗನ ಅತ್ಯಾಚಾರ ಕೃತ್ಯಕ್ಕೆ ನೆರವಾಗಿದ್ದ ಅಪರಾಧಿ.

ಯಲ್ಲಾಲಿಂಗ ಯಡ್ರಾಮಿಗೆ 20 ವರ್ಷ ಜೈಲು ಜೊತೆಗೆ ₹20 ಸಾವಿರ ದಂಡ ಹಾಗೂ ಕೃತ್ಯಕ್ಕೆ ನೆರವಾಗಿದ್ದ ತಂದೆ ದೇವಪ್ಪ ಅಲಿಯಾಸ್‌ ದೇವಿಂದ್ರಪ್ಪ ಯಡ್ರಾಮಿಗೆ 10 ವರ್ಷ ಜೈಲು ಶಿಕ್ಷೆ, ₹10 ಸಾವಿರ ದಂಡ ವಿಧಿಸಿ ಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌(ವಿಶೇಷ ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ₹7 ಲಕ್ಷ ಪರಿಹಾರ ನೀಡುವಂತೆಯೂ ಅವರು ಆದೇಶ ನೀಡಿದ್ದಾರೆ.

- Advertisement -

2023ರ ಮಾರ್ಚ್‌ 26ರ ನಸುಕಿನ 12.18ಕ್ಕೆ ಬಾಲಕಿಗೆ ಫೋನ್‌ ಮಾಡಿ ಕರೆಸಿಕೊಂಡಿದ್ದ ಯಲ್ಲಪ್ಪ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನ್ನ ಬಿಟ್ಟು ಇರಲ್ಲ. ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿದ್ದ. ಬಾಲಕಿ ಒಪ್ಪದಿದ್ದಾಗ ಯಲ್ಲಪ್ಪನ ತಂದೆ ದೇವಪ್ಪ, ಏನಾದರೂ ಸಮಸ್ಯೆ ಬಂದರೆ ನಾನು ನೋಡಿಕೊಳ್ಳುತ್ತೇನೆ ಎಂದಿದ್ದ. ಬಳಿಕ ಮಗನ ಜೊತೆ ಬಾಲಕಿಯನ್ನು ಬಲವಂತದಿಂದ ಆಟೊದಲ್ಲಿ ಕಲಬುರಗಿ ರೈಲು ನಿಲ್ದಾಣದ ತನಕ ಕರೆತಂದು ಸೊಲ್ಲಾಪುರದತ್ತ ಹೋಗುವ ರೈಲು ಹತ್ತಿಸಿದ್ದ. ರೈಲಿನ ಮೂಲಕ ಬಾಲಕಿಯನ್ನು ಪುಣೆಗೆ ಕರೆದುಕೊಂಡು ಹೋದ ಯಲ್ಲಪ್ಪ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದನು ಎಂದು ನೆಲೋಗಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ತನಿಖಾಧಿಕಾರಿಯಾಗಿದ್ದ ಜೇವರ್ಗಿ ಪೊಲೀಸ್‌ ಠಾಣೆಯ ಸಿಪಿಐ ಭೀಮನಗೌಡ ಎ.ಬಿರಾದಾರ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರಪ್ಪ ಬಿ.ತುಪ್ಪದ ವಾದ ಮಂಡಿಸಿದ್ದರು.



Join Whatsapp