ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳು ಜನಸೇವೆಗೆ ತಮ್ಮ ಬದುಕು ಮುಡಿಪಿಟ್ಟಿದ್ದಾರೆ. ಅವರನ್ನು ಗುಲಾಮರು ಎಂದ ಮಾಜಿ ಶಾಸಕರ ಹೇಳಿಕೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣದ ಬೇವೂರು ಹಾಗೂ ತಿಟ್ಟಮಾರನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದ ಸಚಿವ ಹಾಗೂ ಚನ್ನಪಟ್ಟಣದ ಮಾಜಿ ಶಾಸಕ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರು ಹೇಳದೆ ಪರೋಕ್ಷವಾಗಿ ಅವರ ಹೇಳಿಕೆ ಪ್ರಸ್ತಾಪಿಸಿದ್ದಾರೆ.
ಸರ್ಕಾರಿ ಕೆಲಸ ದೇವರ ಕೆಲಸ ಎಂದು ಇದೇ ಜಿಲ್ಲೆಯವರಾದ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಪ್ರವೇಶದ್ವಾರದ ಮೇಲೆ ಬರೆದಿದ್ದಾರೆ. ಸರ್ಕಾರಿ ಅಧಿಕಾರಿಗಳು ಕೂಡ ಜನಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕರು ನಿಮ್ಮನ್ನು ಗುಲಾಮರು ಎಂದು ಕರೆದಿದ್ದು, ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ನಾನು ಸಂವಿಧಾನದ ಅಡಿಯಲ್ಲಿ ಸರ್ಕಾರಿ ನೌಕರ. ಜನ ಸಂತೋಷವಾಗಿರಲು ನಾವು ಸರ್ಕಾರದ ಕೆಲಸ ಮಾಡಬೇಕು. ನೊಂದ ಜನರಿಗೆ ಸಹಾಯ ಮಾಡಲು ಸರ್ಕಾರದಿಂದ ವೇತನ ನೀಡಲಾಗುತ್ತಿದೆ ಎಂದಿದ್ದಾರೆ.
ಕಷ್ಟಗಳಿಗೆ ಪರಿಹಾರ ಕೊಡು ಎಂದು ಕೇಳಲು ಜನ ದೇವಾಲಯಕ್ಕೆ ಹೋಗುತ್ತಾರೆ. ಅದೇ ರೀತಿ ಸರ್ಕಾರಿ ಕಚೇರಿ ಕೂಡ ದೇವಾಲಯ. ಜನರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಲು ಸರ್ಕಾರಿ ಕಚೇರಿ ಇದೆ ಎಂದು ಡಿಸಿಎಂ ಹೇಳಿದ್ದಾರೆ.
ಕ್ಷೇತ್ರದ ಎರಡು ಕಡೆ ಈ ಕಾರ್ಯಕ್ರಮವನ್ನು ಮಾಡಿದ್ದು, ಈಗಾಗಲೇ 3 ಸಾವಿರ ಜನ ಅರ್ಜಿ ಸಲ್ಲಿಸಿದ್ದಾರೆ. ವ್ಯಾಪಾರಕ್ಕೆ ಸಾಲ ಸೌಲಭ್ಯ, ನಿವೇಶನ, ಮನೆ, ಸ್ಮಶಾನಕ್ಕೆ ಭೂಮಿ, ಕಾಲುವೆ ದುರಸ್ತಿ, ರಸ್ತೆ ಅಭಿವೃದ್ಧಿ, ವಿವಿಧ ಪಿಂಚಣಿ, ಪೋಡಿ, ಖಾತೆ ಸಮಸ್ಯೆ, ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಜನರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಇನ್ನು ಮುಂದೆ ಬಡವರ, ರೈತರ ಕೆಲಸಗಳಿಗೆ ಸರಕಾರಿ ಅಧಿಕಾರಿಗಳು, ನೌಕರರು ಲಂಚ ಕೇಳಿದರೆ ನಮಗೆ ದೂರು ನೀಡಿ. ಇದಕ್ಕಾಗಿ ಸರ್ಕಾರಿ ಕಚೇರಿಯಲ್ಲಿ ಪ್ರತ್ಯೇಕ ದೂರವಾಣಿ ಸಂಖ್ಯೆ ನೀಡಲಾಗುವುದು. ಲಂಚ ಕೇಳುವವರನ್ನು ಬಲಿ ಹಾಕುತ್ತೇವೆ. ಸರ್ಕಾರಿ ಅಧಿಕಾರಿಗಳಿಗೆ ವೇತನ ಇದೆ. ಆದರೆ ರೈತನಿಗೆ ಸಂಬಳ, ಬಡ್ತಿ, ಪಿಂಚಣಿ, ಲಂಚ ಸಿಗುವುದಿಲ್ಲ. ಆದರೂ ಅವರು ಬದುಕಬೇಕು. ಅಧಿಕಾರಿಗಳು ಕೂಡ ಅವರ ಪರಿಸ್ಥಿತಿಯಲ್ಲಿ ನಿಂತು ಆಲೋಚನೆ ಮಾಡಬೇಕು. ಇಲ್ಲಿ ತಮ್ಮ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು ಎಂದು ಜನ ಬಂದಿದ್ದಾರೆ. ಈ ಜನರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಅವರ ಕೆಲಸ ಮಾಡಿಕೊಡಬೇಕು ಎಂದು ಡಿಕೆ ಶಿವಕುಮಾರ್ ಅಧಿಕಾರಿಗೆ ತಾಕೀತು ಮಾಡಿದರು.