ನವದೆಹಲಿ: ಸೀನಿಯರ್ ವಿದ್ಯಾರ್ಥಿಗಳಿಂದ ರ್ಯಾಗಿಂಗ್ಗೆ ಒಳಗಾದ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಕಿಡ್ನಿ ವೈಫಲ್ಯವಾಗಿ ಡಯಾಲಿಸಿಸ್ ಮೊರೆ ಹೋಗಬೇಕಾದ ಘಟನೆ ಡುಂಗರಪುರ ವೈದ್ಯಕೀಯ ಕಾಲೇಜಿನಲ್ಲಿ ವರದಿಯಾಗಿದೆ.
ಮೇ15ರಂದು ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು 300 ಸಿಟ್ ಅಪ್ಸ್ ಮಾಡುವಂತೆ ವಿದ್ಯಾರ್ಥಿಗೆ ರ್ಯಾಗಿಂಗ್ ಮಾಡಿದ್ದಾರೆ. ಪರಿಣಾಮ ಆತನ ಮೂತ್ರಪಿಂಡಗಳ ಮೇಲೆ ತೀವ್ರವಾದ ಒತ್ತಡ ಉಂಟಾಗಿದೆ ಎಂದು ಡುಂಗರಪುರ ಪೊಲೀಸ್ ಠಾಣೆಯ ಎಸ್ ಹೆಚ್ಒ ಗಿರ್ಧಾರಿ ಸಿಂಗ್ ತಿಳಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಯನ್ನು ಅಹಮದಾಬಾದ್ನಲ್ಲಿ ಒಂದು ವಾರದವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಮಯದಲ್ಲಿ ನಾಲ್ಕು ಬಾರಿ ಡಯಾಲಿಸಿಸ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿ ಮರಳಿ ಕಾಲೇಜಿಗೆ ಬರಲು ಆರಂಭಿಸಿದ್ದಾನೆ. ಕಾಲೇಜು ಪ್ರಾಂಶುಪಾಲರು 7 ಆರೋಪಿಗಳ ವಿರುದ್ಧ ದೂರು ನೀಡಿದ್ದು ಎಫ್ಐಆರ್ ದಾಖಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.