NEET UG ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆ ಹೊಣೆ ಸಿಬಿಐಗೆ
ನವದೆಹಲಿ: 2024ನೇ ಸಿಎಸ್ಐಆರ್ ಯುಜಿಸಿ ಎನ್ಇಟಿ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಂದೂಡಿದ ಬೆನ್ನಲ್ಲೇ, ಜೂನ್ 23ರ ಭಾನುವಾರದಂದು (ಇಂದು) ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ದಿಢೀರ್ ಆಗಿ ಮುಂದೂಡಲಾಗಿದೆ.
ಇತ್ತೀಚಿನ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ನಾಳೆ (ಜೂನ್ 23ರ ಭಾನುವಾರ) ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ಮುಂದೂಡಿದ್ದೇವೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಲಿದ್ದೇವೆ ಎಂದು ಶನಿವಾರ ರಾತ್ರಿ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ದೇಶದಲ್ಲಿ ಭಾರೀ ವಿವಾದ ಎಬ್ಬಿಸಿರುವ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದಿಂದಾಗಿ ಜೂನ್ 25ರಿಂದ 27ರ ನಡುವೆ ನಿಗದಿಪಡಿಸಿದ್ದ 2024ನೇ ಸಿಎಸ್ಐಆರ್ ಯುಜಿಸಿ ಎನ್ಇಟಿ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈಗಾಗಲೇ ಮುಂದೂಡಿದೆ.
ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗಾಗಿ ಆರೋಗ್ಯ ಸಚಿವಾಲಯವು ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
NEET-NET ಪರೀಕ್ಷೆಯ ವಿವಾದದ ನಡುವೆಯೇ NTA ಮುಖ್ಯಸ್ಥನ ಸ್ಥಾನದಿಂದ ಸುಬೋಧ್ ಕುಮಾರ್ ಅವರನ್ನು ತೆಗೆದುಹಾಕಿ, ಅವರ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಸರಕಾರ ನೇಮಿಸಿದೆ.
ಅಲ್ಲದೆ, ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ (NEET UG) ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆ ಹೊಣೆಯನ್ನು ಕೇಂದ್ರ ಸರ್ಕಾರ ಸಿಬಿಐ ಒಪ್ಪಿಸಿ ಆದೇಶಿಸಿದೆ.
ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ. ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ತನ್ನ ಹೇಳಿಕೆಯಲ್ಲಿ ತಿಳಿಸಿದೆ.