ಪೂಂಜಾಗೆ ಸ್ವಲ್ಪವಾದರೂ ಮೆದುಳು ಇದ್ದರೆ ಹೈನು ಸೀಸನ್ ಬಗ್ಗೆ ಅಂಕಿ ಅಂಶ ಕಲೆ ಹಾಕಿ ತಿಳಿಯಲಿ: ಕೆ. ಅಶ್ರಫ್

Prasthutha|

ಮಂಗಳೂರು: ಇಂಧನ ದರ ಏರಿಕೆ ಮಾಡಿ ಬಂದ ಆದಾಯದಲ್ಲಿ ಮುಸ್ಲಿಮರಿಗೆ ಬಕ್ರೀದ್ ಹಬ್ಬದ ಗಿಫ್ಟ್ ನೀಡುತ್ತಿದ್ದಾರೆ ಎಂಬ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಮಾಜಿ‌ ಮೇಯರ್ ಕೆ. ಅಶ್ರಫ್ ತಿರುಗೇಟು ನೀಡಿದ್ದಾರೆ.

- Advertisement -

ಪೂಂಜಾ ಅವರಿಗೆ ಸ್ವಲ್ಪವಾದರೂ ಮೆದುಳು ಇದ್ದರೆ ರಾಜ್ಯದ, ದೇಶದ ಹೈನು ಸೀಸನ್ ಬಗ್ಗೆ ಅಂಕಿ ಅಂಶ ಕಲೆ ಹಾಕಿ ತಿಳಿಯಲಿ ಎಂದಿದ್ದಾರೆ.

ಬಿಜೆಪಿ ಆಯೋಜಿಸಿದ್ದ ಸರಕಾರದ ವಿರುದ್ಧದ ಪೆಟ್ರೋಲ್ ದರ ಏರಿಕೆಯ ಕುರಿತ ಪ್ರತಿಭಟನೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ರಾಜ್ಯ ಸರಕಾರ ಪೆಟ್ರೋಲ್ ಇಂಧನ ದರ ಏರಿಕೆ ಮಾಡಿ ಬಂದ ಆದಾಯದಲ್ಲಿ ಮುಸ್ಲಿಮರಿಗೆ ಬಕ್ರೀದ್ ಹಬ್ಬದ ಗಿಫ್ಟ್ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಪೂಂಜಾ ತಿಳಿಯಲಿ, ಮುಸಲ್ಮಾನರ ಹಬ್ಬಗಳ ಆಚರಣೆಯು ಯಾವುದೇ ಬಾಹ್ಯ ಸಂಪನ್ಮೂಲಗಳನ್ನು ಅವಲಂಬಿಸಿಲ್ಲ. ಬಕ್ರೀದ್ ಹಬ್ಬಕ್ಕೆ ಮುಸ್ಲಿಮರು ತಮ್ಮ ಪಾಲಿನ ಆರ್ಥಿಕ ಮೂಲದಿಂದ ಅಗಾಧ ಮೊತ್ತದ ದಾನ ಧರ್ಮ ಹಂಚುತ್ತಾರೆ. ಬಕ್ರೀದ್ ಒಂದು ಪವಿತ್ರ ಹಬ್ಬ, ಈ ಹಬ್ಬಕ್ಕೆ ಯಾವುದೇ ಮೂಲದಿಂದ ಕೊಡುಗೆ ಅಪೇಕ್ಷಿಸುವಂತಹ ಸ್ಥಿತಿ ಈ ಸಮುದಾಯಕ್ಕೆ ಬಂದಿಲ್ಲ. ಸರಕಾರ ವಸೂಲಿ ಮಾಡುವ ತೆರಿಗೆಗೂ ಬಕ್ರೀದ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಅಶ್ರಫ್ ತಿಳಿಸಿದ್ದಾರೆ.

ಈ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗಳ ತೆರಿಗೆ ಹಣವನ್ನು ಸರಕಾರ ತೆಗೆದು, ಮುಸ್ಲಿಮರಿಗೆ ಬಕ್ರೀದ್ ಹಬ್ಬದ ಕೊಡುಗೆಯಾಗಿ ಹಂಚುತ್ತಾರೆ ಎಂಬ ಹೇಳಿಕೆ ಅವರ ಮೂರ್ಖತನದ ಪರಮಾವಧಿ. ಮಾನ್ಯ ಪ್ರಧಾನಿ ಮೋದಿಜೀಯವರು ಈ ಹಿಂದೆ ಇಂತಹದೇ ಹೇಳಿಕೆಯನ್ನು ಬನ್ಸಾರ ಲೋಕ ಸಭಾ ಕ್ಷೇತ್ರದಲ್ಲಿ ಚುನಾವಣೆ ಸಮಯದಲ್ಲಿ ನೀಡಿದಾಗ, ಕ್ಷೇತ್ರದ ಜನರು ಬಿಜೆಪಿ ಪಕ್ಷಕ್ಕೆ ಸಮರ್ಪಕವಾದ ಉತ್ತರವನ್ನೇ ನೀಡಿದ್ದಾರೆ ಎಂಬುದನ್ನು ಪೂಂಜಾ ಇನ್ನೂ ತಿಳಿದಿರಲಿಕ್ಕಿಲ್ಲ. ಈ ದೇಶದ ಮುಸ್ಲಿಮ್ ಸಮುದಾಯ ತನ್ನ ಎರಡು ಈದ್ ಹಬ್ಬಗಳ ಸಂಧರ್ಭದಲ್ಲಿ ಬಹು ಕೋಟಿ ರುಪಾಯಿ ಮೊತ್ತ ಮೌಲ್ಯದ ಹೈನುಗಳನ್ನು ಈ ದೇಶದ ರೈತಾಪಿ ವರ್ಗದಿಂದ ಖರೀದಿಸಿ ಬಡವರಿಗೆ ಪೌಷ್ಟಿಕ ಆಹಾರವಾಗಿ ಹಂಚಿಕೆ ಮಾಡಿ ತಮ್ಮ ಧಾರ್ಮಿಕ ಬಾಧ್ಯತೆಯನ್ನು ಪೂರ್ತೀಕರಿಸುತ್ತಾರೆ. ನಿಜವಾಗಿ, ಬಕ್ರೀದ್ ಹಬ್ಬದಿಂದಾಗಿಯೇ ರೈತರಿಗೆ ತಮ್ಮ ಹೈನು ಉತ್ಪನ್ನಕ್ಕೆ ಭಾರತದಲ್ಲಿ ಸೂಕ್ತ ಬೆಲೆ ಬರುವಂತಾಗಿದೆ. ಪೂಂಜಾ ಅವರಿಗೆ ಸ್ವಲ್ಪವಾದರೂ ಮೆದುಳು ಇದ್ದರೆ ರಾಜ್ಯದ, ದೇಶದ ಹೈನು ಸೀಸನ್ ಬಗ್ಗೆ ಅಂಕಿ ಅಂಶ ಕಲೆ ಹಾಕಿ ತಿಳಿಯಲಿ ಎಂದಿದ್ದಾರೆ.

ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಾಗ ಪ್ರಚಾರಕ್ಕೋಸ್ಕರ ಮುಸ್ಲಿಮ್ ಸಂಬಂಧಿತ ಅರೆಬಿಕ್ ಪದ ಬಕ್ರೀದ್ ಅನ್ನು ಬಳಸಿ ಇಲ್ಲಿನ ಮುಸ್ಲಿಮೇತರ ಸಮುದಾಯದವರನ್ನು ದ್ವೇಷ ಸ್ಥಿತಿಯಲ್ಲಿ ಇಟ್ಟು ಅವರನ್ನು ರಾಜಕೀಯ ಗುಲಾಮಗಿರಿಗೆ ತಳ್ಳುವ ಪ್ರಯತ್ನವನ್ನು ಇನ್ನಾದರೂ ಕೈ ಬಿಡಲಿ. ಪ್ರತಿಭಟನೆಗೆ ಸೂಕ್ತ ಪದಗಳ ಕೊರತೆ ಇದೆ ಎಂದಾದರೆ ರಾಜಕೀಯ ನಿವೃತ್ತಿ ಹೊಂದಲಿ. ಮುಸ್ಲಿಮ್ ಸಂಕೇತ, ಚಿಹ್ನೆ, ಪದಗಳ ಬಳಕೆ ಆಧಾರಿತ ರಾಜಕೀಯ ಮಾಡುವುದಕ್ಕಿಂತ, ನಿವೃತ್ತಿಯೇ ಒಳಿತು. ರಾಜಕೀಯ ದೀವಾಳಿ ಆದ ಬಿಜೆಪಿಗೆ ಮುಸ್ಲಿಮ್ ದ್ವೇಷ ಭಾಷಣದ ಮೂಲಕ ಮೈಲೇಜು ಲಭಿಸುವ ಕನಸು ಇದ್ದರೆ ತಕ್ಷಣವೇ ಅಂತಹ ಪ್ರಯತ್ನವನ್ನು ಕೈಬಿಡಲಿ ಎಂದು ಮಾಜಿ ಮೇಯರ್ ಹೇಳಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಪೂಂಜಾರ ಈ ಹೇಳಿಕೆಯು ವೈದಿಕ ಪ್ರೇರಿತವಾಗಿ ಕಾಣಿಸುತ್ತಿದ್ದು, ವಿಷಯ ರಹಿತ ಬಿಜೆಪಿ ಇಂತಹ ಹೇಳಿಕೆಗಳಿಂದಾಗಿಯೇ ತಮ್ಮ ಮತ ಬ್ಯಾಂಕ್ ಅನ್ನು ಸಂರಕ್ಷಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಜನರಿಗೇ ಅರ್ಥವಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಈಶ್ವರಪ್ಪ, ಸಿ.ಟಿ.ರವಿಯರಿಗೆ ಜನರು ಅಂದು ನೀಡಿದ ಗಿಫ್ಟ್ ಅನ್ನು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಜನರು ಪೂಂಜಾರಿಗೂ ನೀಡಲಿದ್ದಾರೆ. ಪೂಂಜಾ ಒಮ್ಮೆ ತನ್ನ ಪಕ್ಷದ ಹಿರಿಯರು ದ್ವೇಷ ಭಾಷಣ ಮಾಡಿದ ಕಾರಣಕ್ಕೆ ಬಂದ ಪಾಡು ಅನ್ನು ನೆನಪಿಸಿಕೊಳ್ಳಲಿ. ಒಂದು ನಿರ್ಧಿಷ್ಟ ಸಮುದಾಯದ ಜನರ ಹಬ್ಬವನ್ನು ಅವಹೇಳನ ಮಾಡುವ ಹರೀಶ್ ಪೂಂಜಾರ ವಿರುದ್ಧ ಪ್ರಕರಣ ದಾಖಲಿಸಬೇಕಿದೆ ಎಂದಿದ್ದಾರೆ.



Join Whatsapp