ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿಸಿದ್ದೇ ಬಿಜೆಪಿ ಸರ್ಕಾರ ಎಂದು ಸಚಿವ ಝಮೀರ್ ಅಹಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಪ್ರತಿ ಲೀಟರ್ ಗೆ 32.98 ರು., ಡೀಸೆಲ್ ಪ್ರತಿ ಲೀಟರ್ಗೆ 31.83 ರು. ಅಬಕಾರಿ ಸುಂಕ ಸಂಗ್ರಹ ಮಾಡುತ್ತಿದೆ. ಇದರ ಬಗ್ಗೆ ಬಿಜೆಪಿ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ 100 ರು. ದಾಟಿದಾಗ ಇವರ ಧ್ವನಿ ಎಲ್ಲಿ ಅಡಗಿತ್ತು. ಅನಿಲ ಬೆಲೆ 419 ಇದ್ದದ್ದು ಸಾವಿರ ರು. ಗಡಿ ದಾಟಿಸಿ ಈಗ 805 ಮಾಡಿರುವುದು ಬಿಜೆಪಿ ಸರ್ಕಾರ. ಇದರ ಬಗ್ಗೆ ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಅಬಕಾರಿ ಸುಂಕ ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ 9.48 ರು. ಹಾಗೂ ಡೀಸೆಲ್ ಗೆ 3.56 ರು. ಇತ್ತು. ಹಾಗಾಗಿಯೇ ಆಗ ಪೆಟ್ರೋಲ್ 68.31 ರು., ಡೀಸೆಲ್ 48.63 ರು.ಗೆ ದೊರೆಯುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಪೆಟ್ರೋಲ್ 106 ವರೆಗೆ ಹೋಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 97.68 ಡಾಲರ್ ಇತ್ತು. ಆಗ ಪೆಟ್ರೋಲ್ ಲೀಟರ್68.31 ರು. ಇತ್ತು ಎಂದು ಮಾಹಿತಿ ನೀಡಿದ ಸಚಿವರು, ಈಗ ಕಚ್ಚಾ ತೈಲ ಬೆಲೆ 77.64 ಡಾಲರ್ ಇದ್ದರೂ ದೇಶದಲ್ಲಿ ಬೆಲೆ ಯಾಕೆ ಕಡಿಮೆ ಆಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.