ಬೆಳ್ತಂಗಡಿ: ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಎದುರು ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಪ್ರತಿಭಟನೆ ಶುಕ್ರವಾರ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಶಾಸಕ ಹರೀಶ್ ಪೂಂಜ ಅವರು ಉದ್ದೇಶ ಪೂರ್ವಕವಾಗಿ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಸರಕಾರ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಖಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕರು ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದ ಅವರು ಪೊಲೀಸರಿಗೆ ಬೆದರಿಕೆ ಹಾಕಿದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಇಲಾಖೆ ಹಿಂಜರಿಯುತ್ತಿದೆ. ಮಸೀದಿಗಳ ಬಗ್ಗೆ ಅವರು ನೀಡಿರುವ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್.ಡಿ.ಪಿ.ಐ ಪಕ್ಷದ ತಾಲೂಕು ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಮಾತನಾಡಿ, ಮುಸ್ಲಿಮರ ವಿರುದ್ಧ ಮಾತನಾಡಿದರೆ ಮಾತ್ರ ಹರೀಶ್ ಪೂಂಜಾಗೆ ರಾಜಕೀಯ ಅಸ್ತಿತ್ವವಿದೆ ಎಂದು ತಿಳಿದು ಅವರು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಮುಖಂಡರುಗಳಾದ ಅಕ್ಬರ್ ಬೆಳ್ತಂಗಡಿ, ಇನಾಸ್ ರೋಡ್ರಿಗಸ್, ಹನೀಫ್ ಪೂಂಜಾಲಕಟ್ಟೆ, ಅಶ್ಪಕ್, ನಿಸಾರ್ ಕುದ್ರಡ್ಕ ಹಾಗೂ ಇತರರು ವಹಿಸಿದ್ದರು.