ಪಾಕಿಸ್ತಾನ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯ

Prasthutha|

ನ್ಯೂಯಾರ್ಕ್: ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಟಿ20 ವಿಶ್ವಕಪ್ ಪಂದ್ಯಾವಳಿಯ ಎ ಗುಂಪಿನ ಪಂದ್ಯ ಶುಕ್ರವಾರ ಮಳೆಯ ಕಾರಣದಿಂದ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ. ಇದರೊಂದಿಗೆ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಅಮೆರಿಕ ತಂಡ ಸೂಪರ್ 8 ಹಂತಕ್ಕೆ ಮುನ್ನಡೆದಿದೆ.ಇದರಿಂದಾಗಿ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ಟೂರ್ನಿಯಿಂದ ನಿರ್ಗಮಿಸಿದೆ.

- Advertisement -

ಪಾಕಿಸ್ತಾನ ಮೂರನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯಗಳಿಸುವ ಮೂಲಕ ಗೆಲುವಿನ ಖಾತೆ ತೆರೆದಿತ್ತು. ಈ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೇರುವ ಆಸೆಯನ್ನು ಜೀವಂತವರಿಸಿಕೊಂಡಿದ್ದ ಪಾಕ್ ಪಡೆಗೆ ಮಳೆ ಅಡ್ಡಿಯಾಗಿದೆ. ಅಂದರೆ ಯುಎಸ್​ಎ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್ ತಂಡ ಗೆದ್ದಿದ್ದರೆ, ಪಾಕಿಸ್ತಾನ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೂಪರ್-8 ಹಂತಕ್ಕೇರುವ ಅವಕಾಶ ಹೊಂದಿತ್ತು.

ಆದರೆ ಯುಎಸ್​ಎ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಮಳೆಯಿಂದ ರದ್ದಾಗಿದ್ದು, ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದೆ. ಇದರೊಂದಿಗೆ ಒಟ್ಟು 5 ಪಾಯಿಂಟ್ಸ್ ಪಡೆದಿರುವ ಯುಎಸ್​ಎ ತಂಡವು ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

- Advertisement -

ಮೂರು ಪಂದ್ಯಗಳಲ್ಲಿ 1 ಗೆಲುವು ಹಾಗೂ 2 ಸೋಲಿನೊಂದಿಗೆ ಪಾಕಿಸ್ತಾನ ಟೂರ್ನಿಯಿಂದ ನಿರ್ಗಮಿಸಿದೆ. ಪಾಕಿಸ್ತಾನಕ್ಕೆ ಗುಂಪು ಹಂತದ ಕೊನೆಯ ಪಂದ್ಯ ಬಾಕಿ ಇದ್ದರೂ, ಇದು ಕೇವಲ ಔಪಚಾರಿಕ ಎನಿಸಲಿದೆ.



Join Whatsapp