ಬಂಟ್ವಾಳ: ಕರೋಪಾಡಿಯ ಕಣಿಯೂರು ಸಮೀಪದ ಗುಂಡಮಜಲಿನ ಮಸೀದಿಯ ಮುಂಭಾಗದಲ್ಲಿ ಸಂಘಪರಿವಾರದ ಗುಂಪೊಂದು ಬಿಜೆಪಿ ವಿಜಯೋತ್ಸವ ಸಂದರ್ಭದಲ್ಲಿ ‘ಜೈಶ್ರೀರಾಮ್ , ಜೈಮೋದಿ’ ಎಂದು ಘೋಷಣೆ ಕೂಗಿ ಸಮಾಜದಲ್ಲಿ ಕಲಹ ಸೃಷ್ಟಿಸಲು ಹೊರಟಿರುವುದು ಖಂಡನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಕಲಂದರ್ ಪರ್ತಿಪಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದುರುದ್ದೇಶಪೂರ್ವಕವಾಗಿ ಸಂಘಪರಿವಾರದ ವಿಘಟನಕಾರರು ಸಮಾಜದಲ್ಲಿ ಕೋಮು ಧ್ರುವೀಕರಣ ಮಾಡಲು ಹಠ ಹಿಡಿದಂತೆ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಸಮಾಜದ ಜನತೆ ವಿವೇಕಶೀಲರಾಗಿದ್ದಾರೆ. ಸಮನ್ವಯ ಬದುಕಿನ ಕನಸು ಕಟ್ಟುತ್ತಿರುವ ದ.ಕನ್ನಡದ ಸರ್ವ ಮತದ ಜನತೆಗೆ ಕಪ್ಪು ಚುಕ್ಕೆಯಾಗಿರುವ ಸಂಘಪರಿವಾರವನ್ನು ಜನತೆ ದೂರ ಇಡಬೇಕಾಗಿದೆ ಎಂದಿದ್ದಾರೆ.
ಮಸೀದಿ ಮುಂಭಾಗ ಕೂಗಾಡಿದ ಎಲ್ಲಾ ದುರುಳರನ್ನು ಪತ್ತೆ ಹಚ್ಚಿ ಪೊಲೀಸರು ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಂತಹ ಸಮಾಜದ್ರೋಹಿ ಕೃತ್ಯಗಳೊಂದಿಗೆ ಪ್ರಚೋದನೆಗೊಂಡು ದಾರಿ ತಪ್ಪುತ್ತಿರುವ ಯುವಕರು ಪೊಲೀಸರ ಕಣ್ಗಾವಲಿನಲ್ಲಿರಬೇಕು ಎಂದೂ ಖಲಂದರ್ ಪರ್ತಿಪ್ಪಾಡಿ ಆಗ್ರಹಿಸಿದ್ದಾರೆ.