ಬೆಂಗಳೂರು: ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಅಧಿಕಾರಿಯ ಬಳಿ ಪಟ್ಟು ಹಿಡಿದ ಘಟನೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದಿದೆ. ಮಾತಿನಲ್ಲಿ ನಮಗೆ ಭರವಸೆ ಬೇಡ ಸಾದ್ಯವಾದರೆ ಲಿಖಿತವಾಗಿ ಕೊಡಿ ಇಲ್ಲದಿದ್ದರೆ ನಮ್ಮ ಹೋರಾಟವನ್ನು ಎದುರಿಸಿ ಎಂದು ಮಹಿಳೆಯರು ಅಧಿಕಾರಿಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮತ್ತು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಂಟಿಯಾಗಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಾಜ್ಯ ವ್ಯಾಪಿ ಆಶಾ ಕಾರ್ಯಕರ್ತೆಯರು ಈ-ಸಮೀಕ್ಷೆ ಮಾಡದಿರುವಂತೆ ಮತ್ತು ಸರಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಎಐಯುಟಿಯುಸಿ ರಾಜ್ಯಾಧ್ಯಕ್ಷೆ ಷಣ್ಮುಖಂ ಮಾತನಾಡುತ್ತಾ, ಆಶಾ ಕಾರ್ಯಕರ್ತೆಯರಿಗೆ ಕಳೆದ ಕೆಲ ದಿನಗಳಿಂದ ಮೊಬೈಲ್ ನಲ್ಲಿ ಈ-ಸಮೀಕ್ಷೆ ನಡೆಸುವಂತೆ ತರಬೇತಿ ನೀಡಲಾಗುತ್ತಿದೆ. ಇದನ್ನು ಮೊಬೈಲ್ ಆ್ಯಪ್ ಮೂಲಕ ಕಡಿಮೆ ಅವಧಿಯಲ್ಲಿ ಟಾರ್ಗೆಟ್ ನೀಡಿ ಸಮೀಕ್ಷೆ ಮಾಡಬೇಕೆಂದು ತಿಳಿಸಲಾಗಿದೆ. ಇವರಿಗೆ ಮೊಬೈಲ್ ಮತ್ತು ಡಾಟಾ ನೀಡದೆ ಒತ್ತಾಯ ಪೂರ್ವಕ ಸರ್ವೆ ಮಾಡಿಸಲು ಮುಂದಾಗಿದ್ದಾರೆ. ಮೊಬೈಲ್ ನಲ್ಲಿ ಈ-ಸಮೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದರೆ ಗಂಡ- ಮಕ್ಕಳಿಂದ ಈ ಕೆಲಸ ಮಾಡಿಸಲು ಹೇಳುತ್ತಿದ್ದಾರೆ. ಅದೂ ಸಾಧ್ಯವಿಲ್ಲ ಎಂದಾದರೆ ಕೆಲಸ ಬಿಟ್ಟು ಹೋಗಿ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಅಶಾ ನೋಡಲ್ ಅಧಿಕಾರಿ ಪ್ರಭು ಗೌಡ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾದರೂ ಪ್ರತಿಭಟನಾಕಾರರು ನಮ್ಮ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಲಿಖಿತವಾಗಿ ಕೊಡುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ರಮಾಥೈಸಿ, ಆಶಾ ಕಾರ್ಯಕರ್ತೆಯರಾದ ಪರಾಹ್ನ, ಸುಮಿತ್ರ, ಭವ್ಯ ಮತ್ತಿತರರು ಉಪಸ್ಥಿತರಿದ್ದರು.