ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಟೀಂ ಇಂಡಿಯಾ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಐರ್ಲೆಂಡ್ ನೀಡಿದ 96 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು..
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ, ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ನಲುಗಿ ಕೇವಲ 96 ರನ್ಗಳಿಗೆ ಆಲೌಟ್ ಆಗಿದೆ. ಐರ್ಲೆಂಡ್ ತಂಡ ಫೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 16 ಓವರ್ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡ ಐರ್ಲೆಂಡ್ 96 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಉಪನಾಯಕ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಪರ ಅತಿ ಹೆಚ್ಚು 3 ವಿಕೆಟ್ ಕಬಳಿಸಿದರು.
97 ರನ್ಗಳ ಸಾಧಾರಣ ಗುರಿ ಪಡೆದ ಭಾರತ ತಂಡವು ನಾಯಕ ರೋಹಿತ್ ಶರ್ಮಾ ಅರ್ಧಶತಕದ ನೆರವಿನಿಂದ 12.2 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ಟಿ20 ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಲಿಲ್ಲ. ಏಕೆಂದರೆ, ತಂಡದ ಮೊತ್ತ 22 ರನ್ಗಳಾಗಿದ್ದಾಗ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಾಯಕ ರೋಹಿತ್ ಶರ್ಮಾ ಗಾಯಗೊಂಡು ನಿವೃತ್ತಿಯಾಗುವ ಮೊದಲು ಕೇವಲ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಮೇತ 52 ರನ್ಗಳ ಅರ್ಧಶತಕ ಬಾರಿಸಿದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರಿಷಭ್ ಪಂತ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ಗಳ ಮೂಲಕ ಅಜೇಯ 36 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 2 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಐರ್ಲೆಂಡ್ ತಂಡದ ಪರ ಮಾರ್ಕ್ ಅಡೈರ್ ಮತ್ತು ಬೆಂಜಮಿನ್ ವೈಟ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ಈ ಗೆಲುವಿನ ಮೂಲಕ ಭಾರತ ತಂಡ ಎ ಗುಂಪಿನಲ್ಲಿ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇದಕ್ಕೂ ಮುನ್ನ ಐರ್ಲೆಂಡ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಪಾಲ್ ಸ್ಟಿರ್ಲಿಂಗ್ (2) ಮತ್ತು ಆಂಡ್ರ್ಯೂ ಬಾಲ್ಬಿರ್ಲಿ (7) ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಈ ಇಬ್ಬರೂ ಬ್ಯಾಟರ್ಗಳು ತಂಡದ ಮೊತ್ತ 9 ರನ್ಗಳಾಗುವಷ್ಟರಲ್ಲಿ ಔಟಾದರು.
ನಂತರ ಬಂದ ಲೋರ್ಕನ್ ಟಕರ್ 10 ರನ್, ಹ್ಯಾರಿ ಟೆಕ್ಟರ್ 4 ರನ್, ಕರ್ಟಿಸ್ ಕ್ಯಾಂಫರ್ 12 ರನ್, ಜಾರ್ಜ್ ಡಾಕ್ರೆಲ್ ಕೇವಲ 3 ರನ್, ಮಾರ್ಕ್ ಅಡೈರ್ 3 ರನ್, ಜೋಶ್ವಾ ಲಿಟಲ್ 14 ರನ್ ಗಳಿಸಿದರು. ಉಳಿದಂತೆ ಕೊನೆಯಲ್ಲಿ ಗರೆಥ್ ಡೆಲಾನಿ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 26 ರನ್ ಗಳಿಸಿ ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು.
ಬೌಲಿಂಗ್ನಲ್ಲಿ ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ 4 ಓವರ್ಗಳಲ್ಲಿ 27 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅರ್ಶ್ದೀಪ್ ಸಿಂಗ್ 4 ಓವರ್ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರು.
ಜಸ್ಪ್ರೀತ್ ಬುಮ್ರಾ 3 ಓವರ್ಗಳಲ್ಲಿ 6 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.