ರಾಹುಲ್ ಗಾಂಧಿ, ಕೇಜ್ರಿವಾಲ್‌ಗೆ ಪಾಕ್ ನಾಯಕರ ಬೆಂಬಲ ಕುರಿತು ತನಿಖೆಯಾಗಬೇಕು: ಮೋದಿ

Prasthutha|

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅರವಿಂದ ಕೇಜ್ರಿವಾಲ್‌ ಹಾಗೂ ರಾಹುಲ್‌ ಗಾಂಧಿ ಅವರಿಗೆ ಪಾಕಿಸ್ತಾನದ ನಾಯಕರು ಬೆಂಬಲ ನೀಡುತ್ತಿರುವ ವಿಚಾರ ಗಂಭೀರ ಅಗಿದ್ದು, ಇದರ ಕುರಿತು ತನಿಖೆಯಾಗಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ.

- Advertisement -

ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ‘ಇಂಡಿಯಾ’ ನಾಯಕರಿಗೆ ಪಾಕಿಸ್ತಾನದ ನಾಯಕರ ಬೆಂಬಲದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ನಾನು ಪ್ರಧಾನಿ ಸ್ಥಾನ ಹೊಂದಿದ್ದು, ಅಂತಹ ವಿಷಯಗಳ ಬಗ್ಗೆ ಮಾತನಾಡಬಾರದು. ಆದರೆ, ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ. ಕೆಲವರು ನಮ್ಮ ವಿರುದ್ಧ ದ್ವೇಷ ಕಾರುತ್ತಾರೆ. ಆ ದ್ವೇಷ ಕಾರುವವರೇ ನಮ್ಮ ನಾಯಕರಿಗೆ ಬೆಂಬಲ ಸೂಚಿಸುತ್ತಾರೆ. ಆಯ್ಕೆಯ ಆಧಾರದ ಮೇಲೆಯೇ ದ್ವೇಷ ಕಾರುವವರು ಬೆಂಬಲ ನೀಡುತ್ತಾರೆ. ಇದು ಗಂಭೀರ ವಿಚಾರವಾಗಿದ್ದು, ಈ ಕುರಿತು ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್‌ ಅವರು ರಾಹುಲ್‌ ಗಾಂಧಿ ಅವರ ಪೋಸ್ಟ್‌ಅನ್ನು ಹಂಚಿಕೊಂಡು, ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಕ್ಕಾಗಲೂ ಚೌಧರಿ ಫವಾದ್‌ ಪ್ರತಿಕ್ರಿಯಿಸಿದ್ದರು. ಅರವಿಂದ್‌ ಕೇಜ್ರಿವಾಲ್‌ ಬಿಡುಗಡೆಯಾಗಿದ್ದಾರೆ. ಇದರಿಂದ ಮೋದಿ ಮತ್ತೊಂದು ಯುದ್ಧ ಸೋತಂತಾಗಿದೆ. ಇದು ಭಾರತಕ್ಕೆ ಶುಭ ಸುದ್ದಿ ಎಂದಿದ್ದರು. ಚುನಾವಣೆ ವೇಳೆಯೂ ಅವರು, ದ್ವೇಷ ಹಾಗೂ ತೀವ್ರವಾದದ ವಿರುದ್ಧ ಶಾಂತಿ ಹಾಗೂ ಸಾಮರಸ್ಯ ಗೆಲ್ಲುತ್ತದೆ ಎಂದು ಕೇಜ್ರಿವಾಲ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದರು. ಕೇಜ್ರಿವಾಲ್ ಇದಕ್ಕೆ ಆಕ್ಷೇಪಿಸಿ, ನಿಮ್ಮ ದೇಶ ನೀವು ನೋಡ್ಕೊಳ್ಳಿ ಎಂದು ಕಿಡಿಗಾರಿದ್ದರು.



Join Whatsapp