ಕೆಲವು ಬಲಿಷ್ಠ ಸಮುದಾಯಗಳು ತಮ್ಮನ್ನು ಪ್ರವರ್ಗ 2 ಎಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸರಕಾರ ಇದಕ್ಕೆ ಮಣಿಯಬಾರದು. ಮಣಿದರೆ ಅತಿ ಹಿಂದುಳಿದ ವರ್ಗದವರಾದ 102 ಜಾತಿ ವರ್ಗಗಳು ಸಂಘಟಿತವಾಗಿ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳಲಿವೆ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಲಿಷ್ಠ ಸಮುದಾಯಗಳಿಗೆ ಈಗಾಗಲೇ ಸರಕಾರ ಕೋಟ್ಯಂತರ ಹಣವನ್ನು ಬಜೆಟ್ನಲ್ಲಿ ಮೀಸಲಿರಿಸಿದೆ. ರಾಜ್ಯ ಸರ್ಕಾರ ವೀರಶೈವ, ಒಕ್ಕಲಿಗ ಸಮುದಾಯಕ್ಕೆ ತಲಾ 500 ಕೋಟಿ ರೂಪಾಯಿ ಬ್ರಾಹ್ಮಣ ವರ್ಗಕ್ಕೆ 50 ಕೋಟಿ ಅನುದಾನ ನೀಡಿದೆ.
ಆದರೆ ಎಸ್ಸಿ ಎಸ್ಟಿ ಸೇರಿದಂತೆ ಸುಮಾರು 309 ಜಾತಿ, ಪಂಗಡಗಳನ್ನು ಒಳಗೊಂಡಿರುವ ಹಿಂದುಳಿದ ವರ್ಗದ ಎಲ್ಲರಿಗೆ ಸರ್ಕಾರ ನೀಡಿದ ಮೊತ್ತ ಕೇವಲ 500 ಕೋಟಿ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಇರುವ ಹಿಂದುಳಿದ ವರ್ಗವನ್ನು ಸರ್ಕಾರ ಕಡೆಗಣಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈಗಾಗಲೇ ನಡೆಸಿರುವ ಜಾತಿವಾರು ಸಮೀಕ್ಷೆಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಈ ಬಗ್ಗೆ ಸರ್ಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.