ಕರ್ತವ್ಯಕ್ಕೆ ಅಡ್ಡಿ | ಶಾಸಕ ಹರೀಶ್ ಪೂಂಜಾರ ಮಾತಿಗೆ ಲಗಾಮು ಇರಲಿ: ಕೆ.ಅಶ್ರಫ್

Prasthutha|

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಮ್ಮ ಶಾಸಕ ಸ್ಥಾನ ತಮ್ಮ ಹಿರಿಯರಿಂದ ಬಂದದ್ದು ಎಂದು ಕೊಂಡಿರಬೇಕು. ತಾನು ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ಎಲ್ಲೆಂದರಲ್ಲಿ ತನ್ನ ನಾಲಗೆಯನ್ನು ಹರಿಬಿಟ್ಟು ಇತರರೊಡನೆ ರೇಗುವುದು ಒಂದು ಚಾಳಿ ಆಗಿ ಬಿಟ್ಟಿದೆ. ಬೆಳ್ತಂಗಡಿ ಪೊಲೀಸರು ತಮ್ಮ ಕಾನೂನು ವ್ಯಾಪ್ತಿಯಲ್ಲಿ ಆರೋಪಿತರನ್ನು ಬಂಧಿಸಿರುವುದನ್ನು ತನ್ನ ಮೂಗಿನ ನೇರಕ್ಕೆ ವಿರೋಧಿಸಿ ಪೊಲೀಸರನ್ನು ಗುರಿಯಾಗಿಸಿ, ಕಾನೂನು ಬಾಹಿರ ಮಾತುಗಳನ್ನಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ವಿರೋಧಿಸಿದ ಪೂಂಜರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕ ಪೂಂಜಾ ಹಿಂದೊಮ್ಮೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಇದೇ ರೀತಿ ಅವ್ಯಾಚ್ಯ ಶಬ್ದಗಳಿಂದ ಬೈದು ರಂಪಾಟ ಮಾಡಿದ್ದು , ನಿನ್ನೆ ಬೆಳ್ತಂಗಡಿ ಪಿಎಸ್ ಐ ಯನ್ನು ಬೈದಿದ್ದಾರೆ. ಬಹುಷ ಪೂಂಜಾ ಅವರು ತನ್ನಲ್ಲಿರುವ ಶಾಸಕ ಸ್ಥಾನ ತಮ್ಮ ಹಿರಿಯರಿಂದ ಬಳುವಳಿಯಾಗಿ ತನಗೆ ಬಂದದ್ದು ಎಂದು ಭಾವಿಸಿರಬೇಕು. ತಾನು ಈ ದೇಶದ ಸಂವಿಧಾನದ ಅಡಿಯಲ್ಲಿನ ಶಾಸಕಾಂಗದ ಅಡಿಯಲ್ಲಿನ ಓರ್ವ ಜವಾಬ್ದಾರಿಯುತ ಜನಪ್ರತಿನಿಧಿ ಎಂಬುದನ್ನು ಮರೆತು, ತನ್ನ ದುರ್ವರ್ತನೆಯ ಮೂಲಕ ತನ್ನ ಮಾತುಗಾರಿಕೆಯನ್ನು ಉಲ್ಲಂಘಿಸಿದ್ದಾರೆ. ಪೂಂಜಾ ತಿಳಿಯಲಿ, ಅವರಿಗಿರುವ ಶಾಸಕ ಸ್ಥಾನ ನಾಡಿನ ಕಾನೂನು ವ್ಯವಸ್ಥೆಯನ್ನು ಪಾಲನೆಗೊಳಿಸಲು,ಜನರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು, ನಾಡನ್ನು ಅಭಿವೃದ್ಧಿ ಪಡಿಸಲು ಇರುವುದಾಗಿದೆ. ತನ್ನ ಶಾಸಕ ಸ್ಥಾನ ತನ್ನ ಹಿರಿಯರ ಪಾಳೆಗಾರಿಕೆಯನ್ನು ಮೆರೆಯಲು ಅಲ್ಲ ಎಂದು ತಿಳಿಯಬೇಕು. ಪೂಂಜರಿಗೆ ತಮ್ಮ ಬಾಯಲ್ಲಿ ಸೌಮ್ಯ ಸಂವಹನದ ಪದಗಳ ಕೊರತೆ ಇದ್ದಲ್ಲಿ ಈ ಬಗ್ಗೆ ತರಬೇತಿಯನ್ನಾದರೂ ಪಡೆದು ಕೊಳ್ಳಲಿ ಎಂದು ಹೇಳಿದ್ದಾರೆ.



Join Whatsapp