ಗುವಾಹಟಿ: 17ನೇ ಆವೃತ್ತಿಯ ಐಪಿಎಲ್ನ ಕೊನೆಯ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಬೇಕಬೇಕಿದ್ದ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.
ಮಳೆ ನಿಂತ ಕಾರಣ ಪಂದ್ಯವನ್ನು ಡಕ್ವರ್ತ್ ನಿಯಮದ ಪ್ರಕಾರ 7 ಓವರ್ಗೆ ಸೀಮಿತಗೊಳಿಸಿ ಟಾಸ್ ಕೂಡ ಹಾರಿಸಲಾಗಿತ್ತು. ಟಾಸ್ ಗೆದ್ದು ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ ಆಟಗಾರರು ಮೈದಾನಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮಳೆ ಮತ್ತೆ ಆರಂಭವಾದಾಗ ಅಂಪೈರ್ಗಳು ಕೊನೆಗೆ ಪಂದ್ಯವನ್ನು ರದ್ದು ಎಂದು ಘೋಷಣೆ ಮಾಡಿದರು.
ಸನ್ರೈಸರ್ಸ್ ಹೈದರಾಬಾದ್ 2ನೇ ತಂಡವಾಗಿ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು. ರಾಜಸ್ಥಾನ್ ಮತ್ತು ಹೈದರಾಬಾದ್ ಸಮಾನ 17 ಅಂಕ ಹೊಂದಿದರೂ ರನ್ ರೇಟ್ನಲ್ಲಿ ಮುಂದಿದ್ದ ಕಾರಣ ಈ ಲಾಭ ಕಮಿನ್ಸ್ ಪಡೆಗೆ ಲಭಿಸಿತು. ಮೇ 21 ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೈದರಾಬಾದ್ ಕಣಕ್ಕಿಳಿಯಲಿದೆ. ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದೆ.