ಹಜ್ ಯಾತ್ರಿಗಳಿಗೆ ಅಗತ್ಯ ವ್ಯವಸ್ಥೆ ಮಾಡಲು ಅಫ್ಸರ್ ಕೊಡ್ಲಿಪೇಟೆ ಆಗ್ರಹ

Prasthutha|

ಬೆಂಗಳೂರು: ಹಜ್ ಯಾತ್ರಿಕರಿಗೆ ಅಗತ್ಯ ವ್ಯವಸ್ಥೆಗಳನ್ನು ಹಜ್ ಸಮಿತಿ ಮಾಡಬೇಕೆಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

- Advertisement -

ಕರ್ನಾಟಕದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ರಾಜ್ಯ ಹಜ್ ಸಮಿತಿ ಸುಗಮ ಯಾತ್ರೆಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಸ್ವಾಯತ್ತ ಸಂಸ್ಥೆಯಾಗಿರುವ ರಾಜ್ಯ ಹಜ್ ಸಮಿತಿಯಿಂದ ಯಾತ್ರೆ ಪ್ರಾರಂಭ ವಾಗುವ ಮುನ್ನ ಹಜ್ ಕ್ಯಾಂಪ್ ಆಯೋಜಿಸಲಾಗುತ್ತದೆ. ಈ ವೇಳೆ ಯಾತ್ರಿಗಳು ಉಳಿದುಕೊಳ್ಳಲು ಬೋರ್ಡಿಂಗ್ ಮತ್ತು ಲಾಡ್ಡಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಕಾಗದ ಪತ್ರ, ವಿದೇಶಿ ವಿನಿಮಯ ಹಂಚಿಕೆ ವ್ಯವಸ್ಥೆ, ವಿಮಾನ ನಿಲ್ದಾಣಕ್ಕೆ ತಲುಪಿಸುವುದು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಸಂಬಂಧ ಪಟ್ಟ ಇಲಾಖೆಗಳ ಸಹಕಾರದೊಂದಿಗೆ ಒದಗಿಸಲಾಗುತ್ತದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಎಷ್ಟು ಯಾತ್ರಿಕರನ್ನು ಹಜ್‌ ಯಾತ್ರೆಗೆ ಕಳುಹಿಸಬೇಕು ಎಂಬುದನ್ನು ಮುಂಬೈ ನಲ್ಲಿರುವ ಹಜ್ ಸಮಿತಿ ನಿರ್ಧರಿಸುತ್ತದೆ. ಈ ಸಮಿತಿಯೊಂದಿಗೆ ರಾಜ್ಯ ಹಜ್ ಸಮಿತಿ ಸಂಯೋಜನೆ ಮಾಡುತ್ತದೆ. ಅರೇಬಿಯಾದಲ್ಲಿ ಕರ್ನಾಟಕದಿಂದ ತೆರಳುವ ಯಾತ್ರಿಕರ ಯೋಗಕ್ಷೇಮಕ್ಕೆ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತದೆ.
ಆದರೆ, ಈ ಬಾರಿ ಕೇವಲ 32 ಸ್ವಯಂ ಸೇವಕರನ್ನು ಮಾತ್ರ ನಿಯೋಜನೆ ಮಾಡಲಾಗಿರುವುದರಿಂದ ಹಜ್ ಯಾತ್ರಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಹಜ್ ಸಮಿತಿ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಆಗ್ರಹಿಸುತ್ತೇನೆ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೆ, ಬೆಂಗಳೂರಿನ ಹಜ್ ಭವನದಲ್ಲಿ ಯಾತ್ರೆಗೆ ಹೊರಡುವ ಯಾತ್ರಿಗಳಿಗೆ ಸರಿಯಾದ ಲಾಡ್ಜಿಂಗ್ ವ್ಯವಸ್ಥೆ ಕೂಡ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಕರ್ನಾಟಕದಿಂದ ಹಜ್ ಯಾತ್ರೆಗೆ ಹೊರಡುವ ಕೊನೆಯ ತಂಡ 24 ಮತ್ತು 25 ತಾರೀಕು ಆಗಿರುವುದರಿಂದ ಅಂದು ಸುಮಾರು 1 ಸಾವಿರಕ್ಕೂ ಅಧಿಕ ಮಂದಿ ಪವಿತ್ರ ಹಜ್ ಯಾತ್ರೆಗೆ ಹೊರಟಿದ್ದು, ಈ ಬಗ್ಗೆ ಸಹ ಸಂಬಂಧಪಟ್ಟವವರು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕೆಂದು ಅಫ್ಸರ್‌ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

- Advertisement -



Join Whatsapp