ನಾಳೆಯೇ ಬಿಜೆಪಿ ಕೇಂದ್ರ ಕಚೇರಿಗೆ ಬರುತ್ತೇವೆ, ಮೋದಿಗೆ ಧೈರ್ಯವಿದ್ದರೆ ಜೈಲಿಗೆ ಹಾಕಲಿ: ಕೇಜ್ರಿವಾಲ್ ಸವಾಲು

Prasthutha|

ನವದೆಹಲಿ: ನಾಳೆಯೇ (ಭಾನುವಾರ) ನಾನು ಮತ್ತು ಎಎಪಿಯ ಮುಖಂಡರು ಬಿಜೆಪಿ ಕೇಂದ್ರ ಕಚೇರಿಗೆ ಬರುತ್ತೇವೆ. ಮೋದಿಗೆ ಧೈರ್ಯವಿದ್ದರೆ ನಮ್ಮೆಲ್ಲರನ್ನೂ ಜೈಲಿಗೆ ಹಾಕಲಿ ನೋಡೋಣ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿಗೆ ಸವಾಲು ಹಾಕಿದ್ದಾರೆ.

- Advertisement -

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರನ್ನು ಜೈಲಿಗೆ ಕಳುಹಿಸುವ ಮೂಲಕ ಪ್ರಧಾನಿ ಮೋದಿ ಅವರು ಈಗ ಜೈಲಿನ ಆಟ ಆಡುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಅದು ಎಎಪಿ ಜೊತೆ ಅದು ವ್ಯವಹಿಸುತ್ತಿರುವ ರೀತಿ ಎಂದು ಹೇಳಿದ್ದಾರೆ.

ನಾನು ಸೇರಿದಂತೆ ಸಂಸದ ರಾಘವ್ ಚಡ್ಡಾ, ಸಚಿವರಾದ ಸೌರಭ್ ಭಾರದ್ವಾಜ್, ಅತಿಶಿ ಎಲ್ಲರನ್ನೂ ಜೈಲಿಗೆ ಕಳುಹಿಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಾಗಿ ನಾವೇ ಖುದ್ದಾಗಿ ಬಿಜೆಪಿ ಕಚೇರಿಗೆ ಹೋಗುತ್ತೇವೆ. ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು. ನಮ್ಮನ್ನು ಜೈಲಿಗೆ ಕಳುಹಿಸುವ ಮೂಲಕ ನಮ್ಮ ಪಕ್ಷವನ್ನು ಹತ್ತಿಕ್ಕಬಹುದು ಎಂದು ಬಿಜೆಪಿಗರು ಭಾವಿಸಿದರೆ, ಅದು ಸಾಧ್ಯವಿಲ್ಲ ಎಂದು ದೆಹಲಿ ಸಿಎಂ ಗುಡುಗಿದ್ದಾರೆ.

- Advertisement -

ದೆಹಲಿಯಲ್ಲಿ ನಮ್ಮ ಸರ್ಕಾರ ಉತ್ತಮ ಶಾಲೆಗಳನ್ನು ನಿರ್ಮಿಸಿದೆ. ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಿದೆ. ಉಚಿತ ಚಿಕಿತ್ಸೆ ನೀಡುವುದರ ಜತೆಗೆ, 24 ಗಂಟೆಗಳ ಕಾಲ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇಂತಹ ಯೋಜನೆಗಳನ್ನು ಜಾರಿ ತರಲು ಬಿಜೆಪಿ ನಾಯಕರಿಗೆ ಸಾಧ್ಯವಾಗುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅರವಿಂದ ಕೇಜ್ರಿವಾಲ್‌‌ಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ತಿಹಾರ್‌ ಜೈಲಿನಿಂದ ಅವರು ಮೇ 10ರಂದು ಬಿಡುಗಡೆಯಾಗಿದ್ದರು.



Join Whatsapp