ಮೂಡಿಗೆರೆ: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ SDPI ಪ್ರತಿಭಟನೆ

Prasthutha|

ಮೂಡಿಗೆರೆ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆದಿದೆ.

- Advertisement -

ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‍ಡಿಪಿಐ ಮೂಡಿಗೆರೆ ತಾಲೂಕು ಘಟಕದ ಅಧ್ಯಕ್ಷ ಚಂದ್ರು ಅಂಗಡಿ, ದೇಶದಲ್ಲಿ ಬೇಟಿ ಬಚಾವೋ ಎಂದು ಭಾಷಣ ಮಾಡುತ್ತಿದವರು ಇಂದು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಇಲ್ಲಿನ ಪ್ರಕರಣಗಳ ಸಂಖ್ಯೆ ಗಮನಿಸಿದರೆ ಇದು ದೇಶದ ಅತಿ ಹಗರಣ ಎನ್ನುವುದರಲ್ಲಿ ಅನುಮಾನವಿಲ್ಲ. ಈ ನೀಚ ಕೃತ್ಯದಲ್ಲಿ ರೇವಣ್ಣ ಕೂಡ ಭಾಗಿಯಾಗಿರುವ ಆರೋಪವಿದೆ. ಈ ಪ್ರಕರಣದಲ್ಲಿ ಹಿಂದೂ ಮಹಿಳೆಯರಿಗೆ ಅನ್ಯಾಯವಾಗಿರುವ ಬಗ್ಗೆ ಬಿಜೆಪಿಯವರು ಖಂಡಿಸುತ್ತಿಲ್ಲ. ಮೋದಿ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹುಬ್ಬಳ್ಳಿಯ ನೇಹಾ ಪ್ರೇಮ ವೈಫಲ್ಯ ಕೊಲೆ ಪ್ರಕರಣವನ್ನು ಹಿಂದೂ, ಮುಸ್ಲಿಂ ಹೆಸರಿನಲ್ಲಿ ರಾದ್ಧಾಂತ ಮಾಡುವ ಮೂಲಕ ಕೋಮು ದ್ವೇಷ ಹರಡುವ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಕೂಡಲೇ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು‌ ಅವರು ಒತ್ತಾಯಿಸಿದರು.

- Advertisement -

ಪಕ್ಷದ ತಾಲ್ಲೂಕು ಉಪಾಧ್ಯಕ್ಷ ಎಂ.ಯು ಷರಿಫ್ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಇಂತಹದ್ದೇ ಘಟನೆಯಲ್ಲಿ ಆರೋಪಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಮಾಧ್ಯಮಗಳು ಅರಚಾಡಿದ್ದವು. ಪ್ರಧಾನಿ ಮೋದಿ ಸಂತ್ರಸ್ತ ಮಹಿಳೆಯರನ್ನು ಖುದ್ದು ಭೇಟಿ ಮಾಡಿದ್ದರು. ಅವರಲ್ಲಿ ಒಬ್ಬ ಮಹಿಳೆಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಸಹ ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಈ ಪ್ರಕರಣದಲ್ಲಿ ಇನ್ನಿಲ್ಲದ ಆಸಕ್ತಿ ತೋರಿಸಿ ಕ್ರಮ ಕೈಗೊಂಡಿತ್ತು. ಆದರೆ ಈಗ ಇದ್ಯಾವುದೂ ಇಲ್ಲ. ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈ ಪ್ರಕರಣದಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವುಮೆನ್ ಇಂಡಿಯಾ ಮೂಮೆಂಟ್ ಸಂಘಟನೆಯ ನಝರತ್ ಬಾನು, ನಯೀಮ್, ಅಖ್ತರ್, ಎಸ್‍ಡಿಪಿಐ ಕಾರ್ಯದರ್ಶಿ ನಾಗೇಶ್ ಸಾಲುಮರ ಮುಖಂಡರಾದ ಜಾವೀದ್ ರಫೀಕ್, ಸಂತೋಷ್, ಮನ್ಸೂರ್ ಆಲ್ದೂರು ಉಪಸ್ಥಿತರಿದ್ದರು.



Join Whatsapp