ನವದೆಹಲಿ: ಕೇರಳಕ್ಕೆ ಮುಂಗಾರು ಮಳೆ ಮೇ 31ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ‘ಈ ವರ್ಷ ನೈಋತ್ಯ ಮುಂಗಾರು ಮೇ 31ರ ವೇಳೆಗೆ ಕೇರಳ ಪ್ರವೇಶಿಸುವ ಸಂಭವವಿದೆ. ಈ ದಿನಾಂಕದಲ್ಲಿ 4 ದಿನ ಹಿಂದು-ಮುಂದು ಆಗಬಹುದು. ಈ ಬಾರಿ ಮುಂಗಾರು ಮುಂಚಿತವಾಗೇನು ಪ್ರವೇಶ ಮಾಡುತ್ತಿಲ್ಲ. ಸಾಮಾನ್ಯವಾಗಿ ಜೂ.1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ವಾಡಿಕೆ ಹೊಂದಿದ್ದು, ಅದೇ ಸಮಯವೇ ಈ ವರ್ಷವೂ ಪಾಲನೆಯಾಗಬಹುದು’ ಎಂದು ಹೇಳಿದೆ.
ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕದ ಕರಾವಳಿಗೂ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಈಗಾಗಲೇ ಪೂರ್ವ ಮುಂಗಾರು ವೇಗ ಪಡೆದುಕೊಂಡಿದೆ. ಸಾಮಾನ್ಯವಾಗಿ ಕೇರಳಕ್ಕೆ ಮೇ 31 ರಂದು ಮುಂಗಾರು ಪ್ರವೇಶಿದರೆ ಕರ್ನಾಟಕಕ್ಕೆ ಎರಡು ದಿನದ ಬಳಿಕ ಮುಂಗಾರು ಪ್ರವೇಶವಾಗಲಿದೆ. ಜೂನ್ 3 ಅಥವಾ 4ರಂದು ಕರ್ನಾಟಕದ ಕರಾವಳಿಗೆ ಮುಂಗಾರು ಪ್ರವೇಶಿಸಲಿದ್ದು, ಬಳಿಕ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.