ಬೆಂಗಳೂರು: ಲಂಚ ಪಡೆದ ಪ್ರಕರಣದಲ್ಲಿ ಜಿಎಸ್ ಟಿ ಅಧಿಕಾರಿಯೊಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಉತ್ತರ ಪ್ರದೇಶ ಮೂಲದ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆ (GST) ಸೂಪರಿಂಟೆಂಡೆಂಟ್ ಜಿತೇಂದ್ರ ಕುಮಾರ್ ಡಾಗೂರ್, ತೆರಿಗೆ ವಿಚಾರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನೆರವಾಗಲು ಮುಂದಾಗಿದ್ದು ಮತ್ತು ದಂಡ ಮನ್ನಾ ಮಾಡಲು 25,000 ರೂ.ಗಳ ಲಂಚ ಪಡೆದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಹೀಗಾಗಿ ಶಿಕ್ಷೆ ವಿಧಿಸಲಾಗಿದೆ. ತನಿಖೆ ಮತ್ತು ವಿಚಾರಣೆ ನಡೆಸಲು ತೆರಿಗೆದಾರರ ಹಣದಿಂದ ಸಾಕಷ್ಟು ಖರ್ಚು ಮಾಡಲಾಗಿದೆ. ಹೀಗಾಗಿ ಆರೋಪಿಗೆ 5 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಭಾರಿ ಮೊತ್ತದ ದಂಡ ವಿಧಿಸಿದ್ದಕ್ಕೆ ನ್ಯಾಯಾಲಯ ಕಾರಣ ನೀಡಿದೆ.