ಮುಂಬೈ ಇಂಡಿಯನ್ಸ್ ಎದುರು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಗೆಲುವು

Prasthutha|

ಕೋಲ್ಕತ್ತಾ: ಇಲ್ಲಿನ ಈಡನ್‌ಗಾರ್ಡನ್ಸ್ ಕ್ರೀಡಾಂಗಣದಲ್ಲಿ‌ ನಡೆದ 2024ರ IPLನ 60ನೇ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿಕೊಟ್ಟಿದೆ. ಇದು ಕೆಕೆಆರ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 9ನೇ ಗೆಲುವಾಗಿದೆ.

- Advertisement -

ಕೋಲ್ಕತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ ತಂಡಗಳ ಪಂದ್ಯ ಮಳೆಯಿಂದಾಗಿ ಒಂದೂವರೆ ಗಂಟೆಗೂ ಹೆಚ್ಚು ವಿಳಂಬವಾಗಿ ಆರಂಭಗೊಂಡಿತ್ತು. ಅಲ್ಲದೆ, ಪಂದ್ಯವನ್ನು 16 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು.

ಟಾಸ್ ಜಯಿಸಿದ ಮುಂಬೈ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ತಂಡ 16 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 157 ರನ್ ಗಳಿಸಿತು. 158 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ಗೆಲ್ಲಲು ಸಾಧ್ಯವಾಗಲ್ಲ. ನಿಗದಿತ 16 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 139 ರನ್ ಗಳಿಸಿತು.

- Advertisement -

ಕೆಕೆಆರ್‌ 16 ರನ್‌ಗಳ ಭರ್ಜರಿ ಜಯಗಳಿಸಿ ಪ್ಲೇ ಆಪ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿ ಹೊರಹೊಮ್ಮಿದೆ. ಆದರೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕನಸು ಭಗ್ನಗೊಂಡಿದೆ.

ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 42 ರನ್ (21 ಎಸೆತ, 6 ಬೌಂಡರಿ, 2 ಸಿಕ್ಸರ್) ಗಳಿಸಿದರು. ನಿತಿಶ್ ರಾಣಾ33 ರನ್ (23 ಎಸೆತ) ,ಆಂಡ್ರೆ ರಸೆಲ್ 24 ರನ್ (14 ಎಸೆತ),ರಿಂಕು ಸಿಂಗ್ 20 ರನ್ (12 ಎಸೆತ) ಹಾಗೂ ರಮಣ್‌ದೀಪ್ ಸಿಂಗ್ ಔಟಾಗದೆ 17 ರನ್ (8 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದ್ದರು. ಈ ಮೂಲಕ ತಂಡ 16 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 157 ರನ್ ಪೇರಿಸಿತು. 

ಬಳಿಕ ಗುರಿ ಬೆನ್ನಟ್ಟಿದ ಮುಂಬೈ ಎಂಟು ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇಶಾನ್ ಕಿಶನ್ ಗರಿಷ್ಠ 40 ರನ್ ಗಳಿಸಿದರು. ಮುಂಬೈ ತಂಡ ಆಡಿರುವ 13ರಲ್ಲಿ ಕೇವಲ ನಾಲ್ಕು ವಿಜಯ ಸಾಧಿಸಿ 8 ಅಂಕಗಳನ್ನು ಹೊಂದಿದೆ. ಅಲ್ಲದೆ, ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದಿದೆ.



Join Whatsapp