ಹಾಸನ: ತನ್ನ ಮೇಲೆ ಪ್ರಜ್ವಲ್ ರೇವಣ್ಣ ಹಲವು ಬಾರಿ ಅತ್ಯಾಚಾರವೆಸಗಿ, ಬೆದರಿಕೆಯೊಡ್ಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆಯೊಬ್ಬರು ದೂರು ದಾಖಲಿಸಿದ್ದಾರೆ.
ಮಹಿಳೆಯ ದೂರು ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 376(2)(ಎನ್) (ಒಂದೇ ಮಹಿಳೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗುವುದು), 506(ಬೆದರಿಸುವಿಕೆ), 354ಎ(1)(ದೈಹಿಕ ಸಂಪರ್ಕ ಹಾಗೂ ಇಷ್ಟವಿಲ್ಲದ ಲೈಂಗಿಕ ಚಟುವಟಿಕೆಗಳು), 354ಬಿ (ಹಲ್ಲೆ ಅಥವಾ ವಿವಸ್ತ್ರಗೊಳಿಸುವ ಉದ್ದೇಶದೊಂದಿಗೆ ಅಪರಾಧವೆಸಗುವುದು) ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.
ಸಂಸದನ ಪ್ರಭಾವಕ್ಕೆ ಭಯಗೊಂಡು ಈ ಘಟನೆಯನ್ನು ಎಲ್ಲೂ ಹೇಳಿರಲಿಲ್ಲ. ಲೈಂಗಿಕ ಹಗರಣ ಬೆಳಕಿಗೆ ಬಂದು ಕರ್ನಾಟಕ ಸರ್ಕಾರ ಎಸ್‌ಐಟಿ ರಚನೆಯನ್ನು ಮಾಡಿದ ನಂತರ ವಿಶೇಷ ತನಿಖಾ ತಂಡದ ಮುಂದೆ ಘಟನೆಯ ಬಗ್ಗೆ ವಿವರಿಸುವ ಧೈರ್ಯ ಮಾಡಿದ್ದೇನೆ ಎಂದು ಸಂತ್ರಸ್ತೆ ಮಹಿಳೆ ಸಿಟ್ ಅಧಿಕಾರಿಗಳಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
2021ರಲ್ಲಿ ಸ್ಥಳೀಯ ಕಾಲೇಜೊಂದರಲ್ಲಿ ಕೆಲವು ಮಹಿಳಾ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಪ್ರವೇಶ ದೊರಕಿಸಿಕೊಡುವಂತೆ ಹೋದ ನಮ್ಮನ್ನು ಮರುದಿನ ಬರುವಂತೆ ಸಂಸದರು ತಿಳಿಸಿದ್ದರು.
ಮರುದಿನ ಹೋದಾಗ ಸಂಸದರ ಜೊತೆ ಹಲವು ಮಂದಿ ಇರುವುದರಿಂದ ಕಚೇರಿ ಸಿಬ್ಬಂದಿ ಮೊದಲ ಮಹಡಿಯಲ್ಲಿ ಕಾಯುವಂತೆ ಹೇಳಿದರು. ಆನಂತರ ಬಂದ ಸಂಸದ ನನ್ನನ್ನು ಕೊಠಡಿಯೊಳಗೆ ಕರೆದ. ಕೊಠಡಿಯೊಳಗೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿಯೇ ನನ್ನ ಕೈಹಿಡಿದು ಎಳೆದುಕೊಂಡು ಕೊಠಡಿಯ ಬಾಗಿಲನ್ನು ಮುಚ್ಚಿದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಆಘಾತಗೊಂಡ ನಾನು ಸಂಸದನನ್ನು ನಡೆಗೆ ವಿರೋಧಿಸಿದಾಗ ಸಂಸದ, ಏನು ಆಗುವುದಿಲ್ಲ ಎಂದು ಬಲವಂತವಾಗಿ ಮಂಚದ ಮೇಲೆ ಕೂರಿಸಿದರು. ನಿನ್ನ ಪತಿಯಿಂದ ನನ್ನ ತಾಯಿ ಭವಾನಿ ರೇವಣ್ಣ ಅವರಿಗೆ ಎಂಎಲ್‌ಎ ಟಿಕೆಟ್ ತಪ್ಪಿ ಹೋಯಿತು. ನಿನ್ನ ಪತಿ ರಾಜಕೀಯವಾಗಿ ಮೇಲೆ ಬರಬೇಕಾದರೆ ನಾನು ಹೇಳಿದಂತೆ ಕೇಳಬೇಕು. ನಿನ್ನ ಪತಿಗೆ ನಮ್ಮ ಬಗ್ಗೆ ಹುಶಾರಾಗಿರುವಂತೆ ಹೇಳು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂಸದರು ಬೆದರಿಸಿದರು ಎಂದು ಮಹಿಳೆ ಹೇಳಿದ್ದಾರೆ.
ನಂತರ ಸಂಸದ ಪ್ರಜ್ವಲ್ ನನ್ನನ್ನು ಮಂಚದ ಮೇಲೆ ತಳ್ಳಿದ. ನನ್ಮ ವಿರೋಧದ ನಡುವೆಯೂ ನನ್ನನ್ನು ವಿವಸ್ತ್ರಳನ್ನಾಗಿ ಮಾಡಿದ. ನಾನು ನಿರಾಕರಿಸಿ ಕಿರುಚಿದ್ದಕ್ಕೆ ನನ್ನ ಬಳಿ ಗನ್ ಇರುವುದಾಗಿ ಹೇಳಿದ. ಸಹಕರಿಸದಿದ್ದರೆ ಮುಂದೆ ನೀನು, ನಿನ್ನ ಪತಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಜೀವ ಬೆದರಿಕೆಯೊಡ್ಡಿದರು ಎಂದು ಮಹಿಳೆ ಅಧಿಕಾರಿಗಳಲ್ಲಿ ತಿಳಿಸಿದ್ದಾರೆ.
ಬಳಿಕ ನನ್ನ ಮೇಲೆ ಅತ್ಯಾಚಾರವೆಸಗಿದರು. ಅದನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡರು. ಇದರ ಬಗ್ಗೆ ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸೋರಿಕೆ ಮಾಡುವುದಾಗಿಯೂ ಬೆದರಿಸಿದರು. ಇದಲ್ಲದೆ ಹಲವು ಬಾರಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಈ ಘಟನೆಯ ಬಳಿಕ ಆಗಾಗ ನನ್ನೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು. ಬೆದರಿಸಿ ವಿಡಿಯೋ ಕರೆಯಲ್ಲಿ ಬೆತ್ತಲಾಗುವಂತೆ ಹೇಳುತ್ತಿದ್ದರು ಎಂದು ಮಹಿಳೆ ದೂರಿಮಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆಯರು ದೂರು ಕೊಡಲು ಮುಂದೆ ಬರುತ್ತಿದ್ದು, ಹಾಸನ ಸಂಸದ, ಮಾಜಿ ಪ್ರಧಾನಿಯ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕುಣಿಕೆ ಬಿಗಿಯಾಗುತ್ತಾ ಹೋಗುತ್ತಿದೆ.