ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Prasthutha|

ನವದೆಹಲಿ: ಕೊರೋನ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಭಾರತದಲ್ಲಿ ನೀಡಲಾಗಿದ ಎರಡು ಲಸಿಕೆಗಳಲ್ಲಿ ಒಂದಾದ ಆಸ್ಟ್ರಾಜೆನೆಕಾ ತಯಾರಿಸಿರುವ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

- Advertisement -

ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದಂತೆ ಅಡ್ಡಪರಿಣಾಮ ಬೀರುವ ಸಾಮರ್ಥ್ಯ ಕೋವಿಶೀಲ್ಡ್‌ಗೆ ಇದೆ ಎಂದು ಅದನ್ನು ತಯಾರಿಸಿರುವ ಆಸ್ಟ್ರಾಜೆನೆಕಾ ಲಂಡನ್‌ನ ನ್ಯಾಯಾಲಯದೆದುರು ಒಪ್ಪಿಕೊಂಡಿದೆ ಈ ಹಿನ್ನೆಲೆಯಲ್ಲಿ ವಿಶಾಲ್‌ ತಿವಾರಿ ಎಂಬುವವರು ಅರ್ಜಿ ದಾಖಲಿಸಿದ್ದಾರೆ.

ತಾನು ತಯಾರಿಸಿದ ಲಸಿಕೆ ಪಡೆದವರಲ್ಲಿ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ನೊಂದಿಗೆ (ಟಿಟಿಎಸ್) ಅಂದರೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ ಸಂಖ್ಯೆ ಇಳಿಕೆ ಸಮಸ್ಯೆ ಎದುರಾಗಲಿದೆ ಎಂಬುದನ್ನು ಆಸ್ಟ್ರಾಜೆನೆಕಾ ಒಪ್ಪಿಕೊಂಡಿದೆ ಎಂಬುದಾಗಿ ಅರ್ಜಿ ವಿವರಿಸಿದೆ.

- Advertisement -

ಕೋವಿಶೀಲ್ಡ್‌ನ ಅಡ್ಡಪರಿಣಾಮಗಳು ಮತ್ತು ಅದರ ಅಪಾಯಕಾರಿ ಅಂಶಗಳನ್ನು ಪರೀಕ್ಷಿಸಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ತಜ್ಞರನ್ನೊಳಗೊಂಡ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯ ವೈದ್ಯಕೀಯ ತಜ್ಞರ ಸಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ರಚಿಸಬೇಕು ಎಂದು ಮನವಿ ಮಾಡಲಾಗಿದೆ.

ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರ ಈ ಸಮಸ್ಯೆಗೆ ಆದ್ಯತೆಯಿಂದ ಬಗೆಹರಿಸಿದರೆ ಭವಿಷ್ಯದಲ್ಲಿ ಭಾರತೀಯರ ಆರೋಗ್ಯ ಮತ್ತು ಜೀವನಕ್ಕೆ ಅಪಾಯ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ಲಸಿಕೆಯಿಂದ ತೀವ್ರವಾಗಿ ಅಂಗವಿಕಲರಾದ ಅಥವಾ ಸಾವನ್ನಪ್ಪಿದ ನಾಗರಿಕರಿಗೆ ಪರಿಹಾರ ನೀಡಲು ಲಸಿಕೆ ಹಾನಿ ಪಾವತಿ ವ್ಯವಸ್ಥೆ ರೂಪಿಸಲು ನ್ಯಾಯಾಲಯ ಆದೇಶಿಸಬೇಕು ಎಂದು ಕೋರಲಾಗಿದೆ.



Join Whatsapp